ಹೈದರಾಬಾದ್: ಡಿಜಿಟಲ್ ಯುಗದಲ್ಲಿ ಇಂದು ಮಕ್ಕಳು ತಮ್ಮ ಬಹುಪಾಲು ಸಮಯವನ್ನು ಸ್ಮಾರ್ಟ್ಫೋನ್, ಲ್ಯಾಪ್ಟಾಪ್ಗಳ ಜೊತೆಯೇ ಕಳೆಯುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳು ಡಿಜಿಟಲ್ ಸಾಧನಗಳ ಬಳಕೆಗೆ ಆರೋಗ್ಯಕರ ಗಡಿ ರೂಪಿಸಬೇಕಿದೆ. ಟೆಕ್ಗಳ ಜೊತೆಗೆ ಅವರ ಆರೋಗ್ಯ ಸಮತೋಲನ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಈ ಪ್ರಮುಖ ಆರು ಕ್ರಮಗಳನ್ನು ನಡೆಸುವ ಮೂಲಕ ತಂತ್ರಜ್ಞಾನ ಮತ್ತು ಆರೋಗ್ಯದ ನಡುವೆ ಉತ್ತಮ ಸಂಬಂಧ ಏರ್ಪಡಿಸಬಹುದು.
ಉದಾಹರಣೆಯಾಗಿ: ಮಕ್ಕಳ ಕಲಿಕೆ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಆಧರಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಕಾರಾತ್ಮಕ ಉದಾಹರಣೆಯಾಗಿ ನೀವಿರಬೇಕು. ಪೋಷಕರು ಸ್ಕ್ರೀನ್ ಟೈಮ್ ಅನ್ನು ಸಿಮೀತಗೊಳಿಸಿ, ಮಕ್ಕಳ ಜೊತೆಗೆ ಓದುವ, ಹೊರಾಂಗಣ ಚುಟುವಟಿಕೆಯಲ್ಲಿ ಆಟವಾಡುವ ಅಥವಾ ಇನ್ನಿತರ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಅವರಿಗೆ ಮಾದರಿಯಾಗಬೇಕು.
ಸ್ಪಷ್ಟ ನಿಯಮ ರೂಪಿಸಿ: ಸ್ಕ್ರೀನ್ ಟೈಮ್ ಕುರಿತಾಗಿ ಮಕ್ಕಳಿಗೆ ಸ್ಪಷ್ಟವಾಗಿ ತಿಳಿಸಿಕೊಡಿ. ಪ್ರತಿಬಾರಿ ಅವರು ಡಿಜಿಟಲ್ ಸಾಧನವನ್ನು ಯಾವಾಗ ಮತ್ತು ಯಾವ ಉದ್ದೇಶಕ್ಕೆ ಬಳಕೆ ಮಾಡಬಹುದು ಎಂಬ ಕುರಿತು ಮಿತಿ ರೂಪಿಸಿ. ಮಕ್ಕಳಿಗೆ ಈ ಸ್ಥಿರತೆ ಕಾಪಾಡುವ ಪ್ರಾಮುಖ್ಯತೆಯನ್ನು ಅರ್ಥಮಾಡಿಸಬೇಕು.
ಟೆಕ್ ಫ್ರೀ ವಲಯ ರೂಪಿಸಿ: ನಿಮ್ಮ ಮನೆಯಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಅಂದರೆ, ಬೆಡ್ರೂಂ, ಡೈನಿಂಗ್ ರೂಮ್ನಂತಹ ಪ್ರದೇಶಗಳನ್ನು ಟೆಕ್ ಮುಕ್ತವಲಯವಾಗಿ ಘೋಷಿಸಿ. ಇಲ್ಲಿ ಕುಟುಂಬದ ಸದಸ್ಯರು ಕೂಡ ಟೆಕ್ ಬಳಕೆ ಮಾಡದಂತೆ ನಿಯಮ ತರುವ ಜೊತೆಗೆ ಮುಖಾಮುಖಿ ಸಂವಹನ, ವಿಶ್ರಾಂತಿಗೆ ಆದ್ಯತೆ ನೀಡಿ.
ಸಮತೋಲಿತ ಚಟುವಟಿಕೆಗೆ ಪ್ರೋತ್ಸಾಹಿಸಿ: ಸ್ಕ್ರೀನ್ ಆಧಾರಿತ ಚಟುವಟಿಕೆ ಹೊರತಾಗಿ ಕೆಲವು ವಿವಿಧ ರೀತಿಯ ಚಟುವಟಿಕೆಗಳಿಗೆ ಅಂದರೆ ಹೊರಾಂಗಣ ಚಟುವಟಿಕೆ, ಓದುವಿಕೆ, ಕ್ರಿಯಾತ್ಮಕ ಚಟುವಟಿಕೆ ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಾಮಾಜಿಕ ಸಂವಹನಕ್ಕೆ ಪ್ರೇರೇಪಿಸಿ. ಅವರ ವಯಸ್ಸಿಗೆ ಅನುಗುಣವಾಗಿ ಬುಕ್, ಕಲೆ ಸಾಮಗ್ರಿ, ಕ್ರೀಡಾ ಸಾಮಗ್ರಿಗಳನ್ನು ನೀಡುವ ಮೂಲಕ ಇದರಿಂದ ದೂರವಿಡಿ.
ಸ್ಕ್ರೀನ್ ಟೈಮ್ ಹೊರತಾದ ಕೆಲಸಕ್ಕೆ ರಿವಾರ್ಡ್ ನೀಡಿ: ಸ್ಕ್ರೀನ್ಟೈಮ್ ಹೊರತಾಗಿ ಮಕ್ಕಳನ್ನು ತಮ್ಮ ಕೆಲಸ ಮಾಡಲು ಪ್ರೇರೇಪಿಸಿ, ಹೋಂ ವರ್ಕ್, ದೈಹಿಕ ಚಟುವಟಿಕೆ ಪೂರೈಸಿದಲ್ಲಿ ಅದಕ್ಕೆ ಪುಟ್ಟ ಬಹುಮಾನ ನೀಡುವುದಾಗಿ ತಿಳಿಸಿ. ಈ ಕಾರ್ಯವೂ ಮಕ್ಕಳನ್ನು ಜವಾಬ್ದಾರಿಯುತವಾಗಿ ಮಾಡಲು ಸಹಾಯ ಮಾಡುತ್ತದೆ.
ಜೊತೆಯಾಗಿ ಚಟುವಟಿಕೆಯಲ್ಲಿ ಭಾಗಿಯಾಗಿ: ಮಕ್ಕಳು ಒಬ್ಬರೇ ಡಿಜಿಟಲ್ ಬಳಕೆ ಮಾಡಲು ಬಿಡದೇ , ಈ ವೇಳೆ ಅವರ ಜೊತೆಗೆ ಪೋಷಕರು ಭಾಗಿಯಾಗುವುದು ಉತ್ತಮ. ಅವರ ಆಟ, ಸಿನಿಮಾ ಮತ್ತು ಶಿಕ್ಷಣದ ವಿಚಾರದಲ್ಲಿ ಭಾಗಿಯಾಗುವುದರಿಂದ ಅವರು ಏನು ಮಾಡುತ್ತಿದ್ದಾರೆ ಎಂಬ ಅರಿವು ಇರಲಿದೆ.
ಇದನ್ನೂ ಓದಿ: ಹೃದಯಕ್ಕೆ ಹಾನಿ; ಮಕ್ಕಳ ಮೊಬೈಲ್, ಟಿವಿ ವೀಕ್ಷಣೆಗೆ ಬೇಕಿದೆ ಕಡಿವಾಣ.. ಇಲ್ಲದಿದ್ದರೆ ಆಗುವ ಅವಾಂತರ ಹೇಳೋಕಾಗಲ್ಲ