BNS Section 111: ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೇಯ, ನಿಂದನೆ ಮತ್ತು ಅಸಭ್ಯ ಭಾಷೆಯ ಪೋಸ್ಟ್‌ಗಳು, ಮಾರ್ಫಿಂಗ್ ವಿಡಿಯೋಗಳು ಮತ್ತು ಚಿತ್ರಗಳ ಮೂಲಕ ದಾಳಿ ಮಾಡುತ್ತಿರುವ ಗುಂಪುಗಳು ಮರಣದಂಡನೆಗೆ ಸಿದ್ಧರಾಗಿರಬೇಕು ಅಥವಾ ಜೀವಾವಧಿ ಶಿಕ್ಷೆಗೂ ಗುರಿಯಾಗುವ ಸಂಭವವಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ಈ ವರ್ಷ ಜುಲೈ 1 ರಿಂದ ಜಾರಿಗೆ ಬಂದಿರುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್-111 ರ ಪ್ರಕಾರ ಅಂತಹ ಅಪರಾಧಗಳಿಗೆ ಕಠಿಣ ಶಿಕ್ಷೆಗಳಿವೆ.
ನಾವು ಎಷ್ಟೇ ಅಶ್ಲೀಲ ಪೋಸ್ಟ್‌ಗಳನ್ನು ಹಾಕಿದ್ರೂ ಪೊಲೀಸರು, ಕಾನೂನು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಿದ್ದ ಸೈಬರ್ ಅಪರಾಧಿಗಳನ್ನು ಹತ್ತಿಕ್ಕಲು ಪೊಲೀಸರು ಈ ಸೆಕ್ಷನ್ ಅಡಿ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಗೋದಾವರಿ ಜಿಲ್ಲೆಯಾದ್ಯಂತ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಸಚಿವ ಲೋಕೇಶ್, ಗೃಹ ಸಚಿವೆ ಅನಿತಾ ಸೇರಿದಂತೆ ಮೈತ್ರಿಕೂಟದ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ವೈಎಸ್ಆರ್ಸಿಪಿ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಹಾಗೂ ನಕಲಿ ಮಾಹಿತಿ ಹರಿಬಿಡುತ್ತಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ರಾಜ್ಯ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಈ ಅಪರಾಧದಲ್ಲಿ ಭಾಗಿಯಾದ ಪ್ರತಿಯೊಬ್ಬರೂ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗಿದೆ.
ವೈಎಸ್ಆರ್ಸಿಪಿಯ ರಾಜ್ಯ ಮಟ್ಟದ ಸಾಮಾಜಿಕ ಮಾಧ್ಯಮ ಸಂಚಾಲಕರು, ಜಿಲ್ಲಾ, ಕ್ಷೇತ್ರ ಹಾಗೂ ತಾಲೂಕು ಮಟ್ಟದ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ನೇಮಿಸಿ ಅವರ ಜೊತೆ ವಾಟ್ಸಾಪ್, ಫೇಸ್ಬುಕ್ ಗ್ರೂಪ್, ಎಕ್ಸ್ ಖಾತೆಗಳನ್ನು ರಚಿಸಲಾಗಿದೆ. ತಮ್ಮ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಅಶ್ಲೀಲ ಹಾಗೂ ಮಾರ್ಫಿಂಗ್ ವಿಡಿಯೋ ಮತ್ತು ಚಿತ್ರಗಳನ್ನು ದೊಡ್ಡ ಮಟ್ಟದಲ್ಲಿ ಮಾಡಿ ವೈರಲ್ ಆಗುವಂತೆ ಪೋಸ್ಟ್ ಹಾಕುತ್ತಿದ್ದರು. ಈ ಅಕ್ರಮ ಚಟುವಟಿಕೆ ನಿರಂತರವಾಗಿ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಆದ್ದರಿಂದ ಇದರಲ್ಲಿ ಭಾಗಿಯಾಗಿರುವ ಎಲ್ಲರೂ ಕಾನೂನಿನ ಪ್ರಕಾರ "ಆರ್ಗನೈಸ್ಡ್ ಕ್ರೈಮ್ ಸಿಂಡಿಕೇಟ್" ನ ಸದಸ್ಯರಾಗಿದ್ದಾರೆ. ಇಂತಹ 50 ಸಾವಿರಕ್ಕೂ ಹೆಚ್ಚು ಜನರನ್ನು ಪೊಲೀಸರು ಗುರುತಿಸಿದ್ದಾರೆ. ಅವರ ವಿರುದ್ಧ ಮತ್ತು ಈ ಸಿಂಡಿಕೇಟ್‌ಗೆ ಸೇರಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಒಮ್ಮೆ BNS ಸೆಕ್ಷನ್ 111 ರ ಅಡಿಯಲ್ಲಿ ಪ್ರಕರಣ ದಾಖಲಾದ್ರೆ ಅವರೆಲ್ಲರೂ ಶಿಕ್ಷೆಗೆ ಗುರಿಯಾಗುವುದು ಖಚಿತವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಸಂಘಟಿತ ರೀತಿಯಲ್ಲಿ ಅಶ್ಲೀಲ ಪೋಸ್ಟ್‌ಗಳು, ಮಾರ್ಫಿಂಗ್ ವಿಡಿಯೋಗಳು ಮತ್ತು ಕಾಮೆಂಟ್‌ಗಳನ್ನು ಮಾಡುವುದನ್ನು ಮುಂದುವರಿಸುವ ಮೂಲಕ, ಅಮಾಯಕರ ಸಾವಿಗೆ ಕಾರಣರಾದವರಿಗೆ BNS ನ ಸೆಕ್ಷನ್ 111 (2) (A) ಅಡಿಯಲ್ಲಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಇವುಗಳ ಜೊತೆಗೆ ರೂ.10 ಲಕ್ಷಕ್ಕೆ ಕಡಿಮೆಯಿಲ್ಲದಂತೆ ದಂಡ ಹಾಕಲಾಗುತ್ತದೆ.
BNS ಸೆಕ್ಷನ್ 111 (2) (b) ಪ್ರಕಾರ ಈ ಅಪರಾಧವು ಸಾವಿಗೆ ಕಾರಣವಾಗದಿದ್ದರೆ, ಕನಿಷ್ಠ ಐದು ವರ್ಷಗಳು ಮತ್ತು ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗುವುದು. 5 ಲಕ್ಷಕ್ಕೆ ಕಡಿಮೆ ಇಲ್ಲದಂತೆ ದಂಡ ನೀಡಲಾಗುತ್ತದೆ. ರಾಜ್ಯಮಟ್ಟ ಅಥವಾ ಜಿಲ್ಲಾ ಮಟ್ಟದಿಂದ ಕಳುಹಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಹಾಕಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಜೀವನ ಹಾಳು ಮಾಡಿಕೊಳ್ಳಬೇಡಿ: ಸಂಘಟಿತ ಅಪರಾಧವೆಂಬಂತೆ ವೈಎಸ್ಆರ್ಸಿಪಿ ಸೋಷಿಯಲ್ ಮೀಡಿಯಾ ನಡೆಸುತ್ತಿರುವ ಈ ದಾಳಿಯಲ್ಲಿ ಹಲವು ಮಂದಿ ತಿಳಿದೋ ತಿಳಿಯದೆಯೋ ಭಾಗಿಯಾಗುತ್ತಿದ್ದಾರೆ. ಹತ್ತಾರು ಖಾತೆಗಳನ್ನು ಅವರ ನಿಜವಾದ ಹೆಸರು ಮತ್ತು ಫೋಟೋ ಇಲ್ಲದೆ ಇನ್ಯಾವುದೋ ಹೆಸರಿನೊಂದಿಗೆ ರಚಿಸಲಾಗಿದೆ ಮತ್ತು ಅವುಗಳಿಂದ ಅಶ್ಲೀಲ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ.
ತಮ್ಮನ್ನು ಯಾರೂ ಪತ್ತೆ ಮಾಡಬಾರದು ಅಥವಾ ಹಿಡಿಯಬಾರದು ಎಂಬ ಉದ್ದೇಶದಿಂದ ಮನಸೋಇಚ್ಛೆ ಕಾಮೆಂಟ್ ಮಾಡುತ್ತಿದ್ದಾರೆ. ಅಂಥವರು ಎಲ್ಲಿಯೇ ಪೋಸ್ಟ್ ಹಾಕಿದರೂ ತಪ್ಪಿಸಿಕೊಳ್ಳುವುದು ಅಸಾಧ್ಯ. ಅವರ ಡಿಜಿಟಲ್ ಹೆಜ್ಜೆಗುರುತುಗಳು ಮತ್ತು ಐಪಿ ವಿಳಾಸಗಳ ಮೂಲಕ ಪೊಲೀಸರು ಅವರನ್ನು ಹಿಡಿಯುತ್ತಿದ್ದಾರೆ. ಒಂದೊಂದು ಪೋಸ್ಟ್ಗೆ ಕೆಲ ದರ ಫಿಕ್ಸ್ ಮಾಡಲಾಗಿದ್ದು, ಪೇಟಿಎಂ ಮೂಲಕ ಹಣ ವಹಿವಾಟು ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.
ತಮ್ಮ ನೆಚ್ಚಿನ ನಾಯಕನಿಗಾಗಿ ಬೇರೆಯವರ ಕುರಿತು ಅಸಭ್ಯ ಪೋಸ್ಟ್‌ಗಳನ್ನು ಹಾಕಿದ್ರೆ ಇಡೀ ಜೀವನವೇ ಹಾಳಾಗುತ್ತದೆ. ಒಮ್ಮೆ ಕೇಸು ದಾಖಲಾದರೆ ನಿಮಗೆ ಉದ್ಯೋಗ ನೀಡುವುದಕ್ಕೆ ಯಾರು ಮುಂದೆ ಬರುವುದಿಲ್ಲ. ಉನ್ನತ ವ್ಯಾಸಂಗ ಅಥವಾ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್‌ಗಳು ಮತ್ತು ವೀಸಾಗಳನ್ನು ರದ್ದುಗೊಳಿಸಲಾಗುತ್ತದೆ. ಈ ಎಲ್ಲ ಪ್ರಕರಣಗಳಲ್ಲಿ ಅಪರಾಧಿಗಳೆಂದು ನಿರ್ಣಯಿಸುವುದು ಸುಲಭ. ಹಾಗೊಂದು ವೇಳೆ ಬಂದರೆ ಆತ ತನ್ನ ಜೀವಿತಾವಧಿಯನ್ನು ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ.
ಪ್ರೋತ್ಸಾಹಿಸುವುದು ಅಪರಾಧ: ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಪೋಸ್ಟ್ ಮಾಡಲು ಪ್ರೋತ್ಸಾಹಿಸುವುದು, ಸಹಾಯ ಮಾಡುವುದು, ಪ್ರಯತ್ನಿಸುವುದು, ಪಿತೂರಿ ಮಾಡುವುದೆಲ್ಲವೂ ಅಪರಾಧ ಎಂದು ತಿಳಿದುಕೊಂಡು ಆ ಆರ್ಗನೈಸಡ್ ಕ್ರೈಮ್ ಮಾಡಲು ಸಾಕಷ್ಟು ಸೌಲಭ್ಯಗಳನ್ನು ಒದಗಿಸುವುದು, ಅದರ ತಯಾರಿಯಲ್ಲಿ ಭಾಗವಹಿಸುವುದು ಬಿಎನ್‌ಎಸ್‌ನ ಸೆಕ್ಷನ್ 111 (3) ರ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಇದು ಕನಿಷ್ಠ ಐದು ವರ್ಷಗಳು ಮತ್ತು ಗರಿಷ್ಠ ಜೀವಾವಧಿ ಶಿಕ್ಷೆಯನ್ನು ಹೊಂದಿರುತ್ತದೆ. 5 ಲಕ್ಷಕ್ಕೆ ಕಡಿಮೆ ಇಲ್ಲದಂತೆ ದಂಡ ವಿಧಿಸಲಾಗುತ್ತದೆ.
ವೈಎಸ್ಆರ್ಸಿಪಿ ಸಾಮಾಜಿಕ ಮಾಧ್ಯಮ ಸಂಚಾಲಕರು, ಸಹ ಸಂಚಾಲಕರು, ಸದಸ್ಯರು, ಅವರು ನಿರ್ವಹಿಸುವ ಗುಂಪುಗಳಲ್ಲಿರುವವರು, ಹಂಚಿಕೊಳ್ಳುವವರು, ಮರು ಪೋಸ್ಟ್ ಮಾಡುವ ಮತ್ತು ಬೆಂಬಲಿಸುವವರನ್ನು ಈ ಆರ್ಗನೈಸಡ್ ಕ್ರೈಮ್ ಸಿಂಡಿಕೇಟ್‌ನ ಸದಸ್ಯರನ್ನಾಗಿ ಪರಿಗಣಿಸುತ್ತದೆ. ಅವರಿಗೆ ಕನಿಷ್ಠ ಐದು ವರ್ಷ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. 5 ಲಕ್ಷಕ್ಕೆ ಕಡಿಮೆ ಇಲ್ಲದಂತೆ ದಂಡ ವಿಧಿಸಲಾಗುತ್ತದೆ.
BNS ಕಾಯ್ದೆಯ ಸೆಕ್ಷನ್ 111 (5) ರ ಅಡಿಯಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡಿರುವ ಆರೋಪಿಗಳನ್ನು ಪೊಲೀಸರ ಕೈಗೆ ಸಿಗದಂತೆ ಮರೆಮಾಡುವುದು ಅಥವಾ ರಕ್ಷಿಸುವುದು ಗಂಭೀರ ಅಪರಾಧವಾಗಿದೆ. ಇದು ಕನಿಷ್ಠ ಮೂರು ವರ್ಷ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆಯನ್ನು ಹೊಂದಿರುತ್ತದೆ. 5 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಇಂತಹ ಕೆಲ ಮತಾಂಧರನ್ನು ವೈಎಸ್ಆರ್ಸಿಪಿ ಪ್ರಮುಖ ನಾಯಕರೇ ರಕ್ಷಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಕಾನೂನಿನ ಪ್ರಕಾರ ಅವರನ್ನು ಶಿಕ್ಷಿಸಬಹುದು.
ಓದಿ: ನನಗೆ ಅಮೆರಿಕದಲ್ಲಿ ಯಾವುದೇ ಭವಿಷ್ಯವಿಲ್ಲ: ಟೆಕ್ ದೈತ್ಯ ಮಸ್ಕ್ ಪುತ್ರಿಯ ಆತಂಕ