ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಮತ್ತಷ್ಟು ವ್ಯಾಪಕವಾಗಿ ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿ, ದೂರದರ್ಶನ ಕಿಸಾನ್ ಚಾನೆಲ್ (ಡಿಡಿ ಕಿಸಾನ್) 50 ಭಾಷೆಗಳಲ್ಲಿ ಮಾತನಾಡಬಲ್ಲ ಇಬ್ಬರು ಎಐ ಆ್ಯಂಕರ್ಗಳನ್ನು ನಿಯೋಜಿಸಲಿದೆ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ. ಈ ಎಐ ಆ್ಯಂಕರ್ಗಳು ಭಾರತೀಯ ಭಾಷೆಗಳು ಸೇರಿದಂತೆ 50 ವಿದೇಶಿ ಭಾಷೆಗಳನ್ನು ಮಾತನಾಡಬಲ್ಲರು.
ಎಐ ಕ್ರಿಶ್ ಮತ್ತು ಎಐ ಭೂಮಿ ಎಂಬ ಈ ಎರಡು ಎಐ ನಿರೂಪಕರು ಕಂಪ್ಯೂಟರ್ಗಳಾಗಿದ್ದು, ಇವು ಮನುಷ್ಯರಂತೆಯೇ ಕೆಲಸ ಮಾಡುತ್ತವೆ ಎಂದು ಸಚಿವಾಲಯ ತಿಳಿಸಿದೆ. ಆದರೆ ಮನುಷ್ಯರಿಗೆ ಭಿನ್ನವಾಗಿ ಯಾವುದೇ ದಣಿವು ಆಯಾಸವಿಲ್ಲದೆ ಇವರು 24 ಗಂಟೆ 365 ದಿನಗಳು ಕಾಲ ಸುದ್ದಿಗಳನ್ನು ಓದಬಲ್ಲರು.
ಮೇ 26, 2015 ರಂದು ಆರಂಭಗೊಂಡ ಡಿಡಿ ಕಿಸಾನ್ ರೈತರಿಗೆ ಮೀಸಲಾಗಿರುವ ದೇಶದ ಏಕೈಕ ಟಿವಿ ಚಾನೆಲ್ ಆಗಿದೆ.
ಹೊಸ ಎಐ ಆ್ಯಂಕರ್ಗಳು ಮೇ 26 ರಂದು ಚಾನೆಲ್ ನ ಒಂಬತ್ತನೇ ವಾರ್ಷಿಕೋತ್ಸವದಂದು ಅಧಿಕೃತವಾಗಿ ಸುದ್ದಿಗಳನ್ನು ಓದಲು ಪ್ರಾರಂಭಿಸಲಿದ್ದಾರೆ.
ಎಐ ಆ್ಯಂಕರ್ಗಳು ಕಾಶ್ಮೀರದಿಂದ ತಮಿಳುನಾಡಿನವರೆಗೆ ಮತ್ತು ಗುಜರಾತ್ನಿಂದ ಅರುಣಾಚಲದವರೆಗೆ, ದೇಶ ಮತ್ತು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನೆಗಳು, ಕೃಷಿ ಮಂಡಿಗಳಲ್ಲಿನ ಪ್ರವೃತ್ತಿಗಳು, ಹವಾಮಾನ ಬದಲಾವಣೆಗಳು ಅಥವಾ ಸರ್ಕಾರಿ ಯೋಜನೆಗಳ ಬಗೆಗಿನ ಎಲ್ಲ ಮಾಹಿತಿಗಳನ್ನು ರೈತರಿಗೆ ತಲುಪಿಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ.
"ಡಿಡಿ ಕಿಸಾನ್ ಚಾನೆಲ್ ಸಮತೋಲಿತ ಕೃಷಿ, ಪಶುಸಂಗೋಪನೆ ಮತ್ತು ನೆಡುತೋಪುಗಳನ್ನು ಒಳಗೊಂಡ ಕೃಷಿಯ ಮೂರು ಆಯಾಮದ ಪರಿಕಲ್ಪನೆಯನ್ನು ಬಲಪಡಿಸುತ್ತಿದೆ" ಎಂದು ಸಚಿವಾಲಯ ತಿಳಿಸಿದೆ. ಹವಾಮಾನ, ಜಾಗತಿಕ ಮತ್ತು ಸ್ಥಳೀಯ ಮಾರುಕಟ್ಟೆಗಳು ಇತ್ಯಾದಿಗಳಲ್ಲಿನ ಬದಲಾವಣೆಗಳ ಬಗ್ಗೆ ರೈತರಿಗೆ ಮುಂಚಿತವಾಗಿ ತಿಳಿಸಿ, ಆ ಮೂಲಕ ಅವರು ಸೂಕ್ತ ಯೋಜನೆಗಳನ್ನು ರೂಪಿಸಲು ಡಿಡಿ ಕಿಸಾನ್ ಸಹಾಯ ಮಾಡುತ್ತಿದೆ.
ಪ್ರಗತಿಪರ ರೈತರ ಸಾಧನೆಗಳನ್ನು ಎಲ್ಲಾ ಜನರಿಗೆ ತಲುಪಿಸಲು, ದೇಶದ ಕೃಷಿ ಮತ್ತು ಗ್ರಾಮೀಣ ಸಮುದಾಯಕ್ಕೆ ಸೇವೆ ಸಲ್ಲಿಸಲು ಮತ್ತು ಅವರಿಗೆ ಶಿಕ್ಷಣ ನೀಡುವ ಮೂಲಕ ಸಮಗ್ರ ಅಭಿವೃದ್ಧಿಯ ವಾತಾವರಣವನ್ನು ಸೃಷ್ಟಿಸುವತ್ತ ಕೆಲಸ ಮಾಡಲು ಡಿಸಿ ಕಿಸಾನ್ ಕಾರ್ಯನಿರ್ವಹಿಸುತ್ತಿದೆ. ವರ್ಚುವಲ್ ನ್ಯೂಸ್ ಆ್ಯಂಕರ್ ಅಥವಾ ಸಿಂಥೆಟಿಕ್ ನ್ಯೂಸ್ ಆ್ಯಂಕರ್ ಎಂದೂ ಕರೆಯಲ್ಪಡುವ ಎಐ ಆಂಕರ್, ಕಂಪ್ಯೂಟರ್ ರಚಿತ ಮಾನವ ಸುದ್ದಿ ನಿರೂಪಕನ ಪ್ರತಿರೂಪವಾಗಿದೆ.
ಇದನ್ನೂ ಓದಿ : ರಷ್ಯಾದಿಂದ ಬಾಹ್ಯಾಕಾಶ ಶಸ್ತ್ರ ಉಪಗ್ರಹ ಉಡಾವಣೆ: ಅಮೆರಿಕ ಪ್ರತಿಪಾದನೆ - Space Weapon