ನವದೆಹಲಿ: ಗೂಗಲ್ ಪ್ಲೇ ಸ್ಟೋರ್ನಲ್ಲಿ ಇನ್-ಆ್ಯಪ್ ಖರೀದಿಯ ವೇಳೆ ಅಧಿಕ ಶುಲ್ಕ ವಿಧಿಸಲಾಗುತ್ತಿರುವ ಬಗ್ಗೆ ಅಲೈಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ (ಎಡಿಐಎಫ್) ಗುರುವಾರ ಕಳವಳ ವ್ಯಕ್ತಪಡಿಸಿದೆ. ಅಲೈಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ ಇದು ಸಾವಿರಾರು ಸ್ವದೇಶಿ ಸ್ಟಾರ್ಟ್ಅಪ್ಗಳನ್ನು ಪ್ರತಿನಿಧಿಸುವ ಸಂಘಟನೆಯಾಗಿದೆ. ಈ ಶುಲ್ಕಗಳು ದೇಶದ ಡಿಜಿಟಲ್ ಉದ್ಯಮಿಗಳ ಹಿತದೃಷ್ಟಿಯಿಂದ ಪ್ರತಿಕೂಲವಾಗಿವೆ ಎಂದು ಅದು ಹೇಳಿದೆ.
ಈ ಅಪ್ಲಿಕೇಶನ್ ಸ್ಟೋರ್ ಶುಲ್ಕಗಳು ಶೇಕಡಾ 15 ರಿಂದ 30 ರವರೆಗೆ ವಿಪರೀತ ಹೆಚ್ಚಿನ ಮಟ್ಟದಲ್ಲಿವೆ ಎಂದು ಹೇಳಿದ ಎಡಿಐಎಫ್ನ ಸಹಾಯಕ ನಿರ್ದೇಶಕ ಪ್ರತೀಕ್ ಜೈನ್ ಹೇಳಿದ್ದಾರೆ. ಗೂಗಲ್ ತನ್ನ ಹೊಸ ಪಾವತಿ ನೀತಿಯ ಭಾಗವಾಗಿ ಡೆವಲಪರ್ಗಳ ಮೇಲೆ ಅಧಿಕ ಶುಲ್ಕ ವಿಧಿಸುವುದನ್ನು ನಿರ್ಬಂಧಿಸುವಂತೆ ಕೋರಿ ಸ್ಟಾರ್ಟ್ಅಪ್ಗಳು ಸಲ್ಲಿಸಿದ್ದ ಮಧ್ಯಂತರ ಪರಿಹಾರ ಅರ್ಜಿಗಳನ್ನು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ವಜಾಗೊಳಿಸಿದೆ ಎಂದು ಅವರು ತಿಳಿಸಿದರು.
"ದರಗಳನ್ನು ಮರುಪರಿಶೀಲಿಸಬೇಕು ಮತ್ತು ಇಬ್ಬರಿಗೂ ಪರಸ್ಪರ ಅನುಕೂಲಕರವಾಗಿರುವಂತೆ ದರಗಳಿರಬೇಕು. ಈ ಮಾದರಿಯು ಭಾರತದ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆ ಮತ್ತು ಸುಸ್ಥಿರತೆ ಬೆಂಬಲಿಸುತ್ತದೆ" ಎಂದು ಜೈನ್ ಹೇಳಿದರು. "ನಮಗೆ ನ್ಯಾಯಾಂಗದ ಮೇಲೆ ಭರವಸೆ ಇದೆ ಮತ್ತು ಭಾರತೀಯ ಅಪ್ಲಿಕೇಶನ್ ತಯಾರಿಸುವ ಸಮುದಾಯದ ಉತ್ತಮ ಹಿತಾಸಕ್ತಿಗಳಿಗೆ ಭಾರತೀಯ ನ್ಯಾಯಾಂಗವು ಆದ್ಯತೆ ನೀಡಲಿದೆ ಎಂಬ ಭರವಸೆಯೊಂದಿಗೆ ಹೆಚ್ಚಿನ ವಿಚಾರಣೆಗಾಗಿ ನಾವು ಕಾಯುತ್ತಿದ್ದೇವೆ." ಎಂದು ಅವರು ನುಡಿದರು.
ಸುಪ್ರೀಂ ಕೋರ್ಟ್ ಸೂಚಿಸಿದಂತೆ ಮಧ್ಯಂತರ ಪರಿಹಾರ ನೀಡಲು ಅಗತ್ಯ ಮಾನದಂಡಗಳನ್ನು ಪೂರೈಸಲು ಮಾಹಿತಿದಾರರು ವಿಫಲರಾಗಿದ್ದಾರೆ ಎಂದು ಸಿಸಿಐ ಈ ಹಿಂದೆ ಅಭಿಪ್ರಾಯಪಟ್ಟಿತ್ತು.
ದೇಶದ ಆನ್ಲೈನ್ ಮಾರುಕಟ್ಟೆಯಲ್ಲಿ ಟೆಕ್ ದೈತ್ಯ ಗೂಗಲ್ ತನ್ನ ಪ್ರಾಬಲ್ಯದ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಭಾರತೀಯ ಸ್ಪರ್ಧಾ ಆಯೋಗ ಕಳೆದ ವಾರ ಗೂಗಲ್ ಪ್ಲೇ ಸ್ಟೋರ್ ಬಗ್ಗೆ ತನಿಖೆಗೆ ಆದೇಶಿಸಿತ್ತು. ಗೂಗಲ್ ತನ್ನ ಪ್ಲೇ ಸ್ಟೋರ್ ನಲ್ಲಿ ಅನ್ಯಾಯಕರ ಮತ್ತು ತಾರತಮ್ಯದ ನಿಯಮಗಳನ್ನು ವಿಧಿಸಿದೆ. ಇದು ದೇಶದ ಕಾನೂನಿನ ಹಲವಾರು ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಸಿಸಿಐ ಹೇಳಿದೆ. ಈ ಹಿಂದೆ ಆಂಡ್ರಾಯ್ಡ್ ಮಾರ್ಕೆಟ್ ಎಂದು ಕರೆಯಲ್ಪಡುತ್ತಿದ್ದ ಗೂಗಲ್ ಪ್ಲೇ ಗೂಗಲ್ ವಿತರಿಸುವ ಡಿಜಿಟಲ್ ಅಪ್ಲಿಕೇಶನ್ಗಳ ಅಧಿಕೃತ ಆನ್ ಲೈನ್ ಸ್ಟೋರ್ ಆಗಿದೆ.
ಇದನ್ನೂ ಓದಿ : ಸ್ಯಾಮ್ಸಂಗ್ ಗ್ಯಾಲಕ್ಸಿ A55 5G, A35 5G ಬಿಡುಗಡೆ: ಬೆಲೆ ಎಷ್ಟು, ವಿಶೇಷತೆ ಏನು?