ನವದೆಹಲಿ: 2023 ರಲ್ಲಿ ಹೆಚ್ಚು ಮಾರಾಟವಾದ 10 ಸ್ಮಾರ್ಟ್ಪೋನ್ಗಳ ಜಾಗತಿಕ ಪಟ್ಟಿಯಲ್ಲಿ ಆ್ಯಪಲ್ ಮೊದಲ ಬಾರಿಗೆ ಅಗ್ರ ಏಳು ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ವರದಿಯೊಂದು ಬುಧವಾರ ತೋರಿಸಿದೆ. ಹಾಗೆಯೇ ಭಾರತವು ಒಂದೇ ವರ್ಷದಲ್ಲಿ 10 ಮಿಲಿಯನ್ ಐಫೋನ್ ಮಾರಾಟ ದಾಟಿದ ಐದನೇ ಸ್ಮಾರ್ಟ್ಫೋನ್ ಮಾರುಕಟ್ಟೆಯಾಗಿದೆ.
ಟಾಪ್ 10 ಸ್ಮಾರ್ಟ್ ಫೋನ್ಗಳ ಒಟ್ಟಾರೆ ಮಾರುಕಟ್ಟೆ ಪಾಲು 2022 ರಲ್ಲಿ ಇದ್ದ ಶೇಕಡಾ 19 ರಿಂದ 2023 ರಲ್ಲಿ ಶೇಕಡಾ 20 ಕ್ಕೆ ತಲುಪಿದೆ. ಆ್ಯಪಲ್ನ ಐಫೋನ್ 14 ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಆಗಿದ್ದು, ಈ ಪೈಕಿ ಅರ್ಧದಷ್ಟು ಮಾರಾಟ ಯುಎಸ್ ಮತ್ತು ಚೀನಾದಲ್ಲೇ ಆಗಿದೆ. ಐಫೋನ್ 15 ಸರಣಿಯು 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಈ ಸರಣಿಯ ಐಫೋನ್ 15 ಪ್ರೊ ಮ್ಯಾಕ್ಸ್ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಆಗಿದೆ.
ಪಟ್ಟಿಯಲ್ಲಿ ಅತ್ಯಂತ ಹಳೆಯ ಮಾದರಿಯಾಗಿರುವ ಆ್ಯಪಲ್ನ ಐಫೋನ್ 13 ಜಪಾನ್ ಮತ್ತು ಭಾರತದಲ್ಲಿ ಎರಡಂಕಿ ಬೆಳವಣಿಗೆಯೊಂದಿಗೆ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ. ಸ್ಯಾಮ್ಸಂಗ್ನ ಬಜೆಟ್ ಎ ಸರಣಿಯು ವಿವಿಧ ಪ್ರದೇಶಗಳು ಮತ್ತು ಗ್ರಾಹಕ ವಿಭಾಗಗಳಲ್ಲಿ ಟಾಪ್ -10 ಪಟ್ಟಿಯಲ್ಲಿ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ 14 5ಜಿ ಯುಎಸ್ ಮತ್ತು ಭಾರತದಲ್ಲಿ ಹೆಚ್ಚಿನ ಮಾರಾಟ ಕಂಡಿದ್ದು, ಏಳನೇ ಸ್ಥಾನ ಪಡೆದುಕೊಂಡಿದೆ.
ಮೊಟ್ಟಮೊದಲ ಬಾರಿಗೆ ಐಫೋನ್ ಅನ್ನು ಜನವರಿ 9, 2007 ರಂದು ಮ್ಯಾಕ್ ವರ್ಲ್ಡ್ ಸಮಾವೇಶದಲ್ಲಿ ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಬಿಡುಗಡೆ ಮಾಡಿದ್ದರು. ಇದನ್ನು ಮೊದಲ ಸ್ಮಾರ್ಟ್ ಫೋನ್ ಎಂದು ಪರಿಗಣಿಸಲಾಗಿಲ್ಲವಾದರೂ, ಗ್ರಾಹಕರು ಮತ್ತು ವ್ಯವಹಾರಗಳಲ್ಲಿ ಮೊಬೈಲ್ ಕಂಪ್ಯೂಟಿಂಗ್ಗೆ ಜಾಗತಿಕ ಬದಲಾವಣೆ ತರಲು ಐಫೋನ್ ಸಹಾಯ ಮಾಡಿದೆ. ಸ್ಯಾಮ್ಸಂಗ್ ನಂತಹ ಕಂಪನಿಗಳ ಗೂಗಲ್ ಆಂಡ್ರಾಯ್ಡ್ ಆಧಾರಿತ ಸಾಧನಗಳು ಇದರ ಪ್ರಾಥಮಿಕ ಪ್ರತಿಸ್ಪರ್ಧಿಗಳಾಗಿವೆ. ಸ್ಯಾಮ್ಸಂಗ್ ಸಹ 2007ರಲ್ಲಿಯೇ ತನ್ನ ಮೊಟ್ಟ ಮೊದಲ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿತ್ತು.
ಮೊದಲ ತಲೆಮಾರಿನ ಐಫೋನ್ನಲ್ಲಿ ಐಟ್ಯೂನ್ಸ್, ಸಫಾರಿ ವೆಬ್ ಬ್ರೌಸರ್ ಮತ್ತು ಐಫೋಟೋ ಸೇರಿದಂತೆ ಆಪಲ್ ಸಾಫ್ಟ್ವೇರ್ ಸೂಟ್ ಪ್ರಿಲೋಡೆಡ್ ಆಗಿರುತ್ತಿದ್ದವು. ಇಂಟರ್ ನೆಟ್ ಮೆಸೇಜಿಂಗ್ ಪ್ರೋಟೋಕಾಲ್ ಮತ್ತು ಪೋಸ್ಟ್ ಆಫೀಸ್ ಪ್ರೋಟೋಕಾಲ್ 3 ಇಮೇಲ್ ಸೌಲಭ್ಯಗಳು ಕೂಡ ಇದರಲ್ಲಿದ್ದವು. ಎಟಿ ಅಂಡ್ ಟಿ ವೈರ್ ಲೆಸ್ ನೊಂದಿಗೆ ಎರಡು ವರ್ಷಗಳ ವಿಶೇಷ ಸಹಭಾಗಿತ್ವದಲ್ಲಿ ಆ್ಯಪಲ್ ಐಫೋನ್ ಅನ್ನು ಬಿಡುಗಡೆ ಮಾಡಿತ್ತು.
ಇದನ್ನೂ ಓದಿ : 2024ರ 3ನೇ ತ್ರೈಮಾಸಿಕದಲ್ಲಿ ಶೇ 6ರಷ್ಟು ಜಿಡಿಪಿ ಬೆಳವಣಿಗೆ: ಐಸಿಆರ್ಎ ಅಂದಾಜು