ಕೊಲಂಬೊ: ಶ್ರೀಲಂಕಾದಲ್ಲಿ ನವೆಂಬರ್ 22 ರಿಂದ ಪ್ರಾರಂಭವಾಗುವ ಪ್ರತಿಕೂಲ ಹವಾಮಾನದಿಂದ 335,000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ದೇಶದ ವಿಪತ್ತು ನಿರ್ವಹಣಾ ಕೇಂದ್ರ ಗುರುವಾರ ಮಾಹಿತಿ ನೀಡಿದೆ. ದೇಶಾದ್ಯಂತ ಒಟ್ಟು 25 ಆಡಳಿತ ಜಿಲ್ಲೆಗಳ ಪೈಕಿ 23 ರಲ್ಲಿ 99,876 ಕುಟುಂಬಗಳಿಗೆ ಸೇರಿದ 335,155 ಜನರು ಮಳೆ ಸಂಬಂಧಿತ ವಿಪತ್ತುಗಳಿಂದ ಹಾನಿಗೊಳಗಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ತನ್ನ ಇತ್ತೀಚಿನ ಪರಿಸ್ಥಿತಿ ನವೀಕರಣ ವರದಿಯಲ್ಲಿ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಧಾರಾಕಾರ ಮಳೆಗೆ 12 ಬಲಿ, 17 ಮಂದಿಗೆ ಗಂಭೀರ ಗಾಯ: ಮಳೆ ಸಂಬಂಧಿತ ದುರಂತಗಳಲ್ಲಿ 12 ಜನರು ಸಾವನ್ನಪ್ಪಿದ್ದಾರೆ, 17 ಮಂದಿ ಗಾಯಗೊಂಡಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. 95 ಮನೆಗಳು ಸಂಪೂರ್ಣವಾಗಿ ಮತ್ತು 1,708 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಲಂಕಾ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ಒದಗಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಆಳವಾದ ವಾಯುಭಾರ ಕುಸಿತವು ಶ್ರೀಲಂಕಾದ ಪೂರ್ವ ಕರಾವಳಿಯ ಸಮೀಪಕ್ಕೆ ಚಲಿಸುವ ಸಾಧ್ಯತೆಯಿದೆ ಮತ್ತು ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.
ತಮಿಳುನಾಡಿನಲ್ಲಿ ಭಾರಿ ಅವಾಂತರ ಮಾಡಿದ ಫೆಂಗಲ್: ಈ ನಡುವೆ ಫೆಂಗಲ್ ಚಂಡಮಾರುತ್ ಅಬ್ಬರದಿಂದ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿಯ ಕಾರೈಕಲ್ ಮತ್ತು ಮಹಾಬಲೀಪುರಂ ನಡುವೆ ಅಪ್ಪಳಿಸುವ ಸಾಧ್ಯತೆ ಇದೆ. ಗಂಟೆಗೆ 70 ಕಿ.ಮೀ ವೇಗದವರೆಗೂ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ಇಂದು ಸಂಜೆ ಮತ್ತು ನಾಳೆ ಬೆಳಗ್ಗೆ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಗಾಳಿ ಗಂಟೆಗೆ 85 ಕಿ.ಮೀ ವೇಗದಲ್ಲಿ ಬೀಸಲಿದ್ದು, ಕಡಿಮೆ ಒತ್ತಡ ಪ್ರದೇಶ ತೀವ್ರಗೊಳ್ಳುವ ಸಾಧ್ಯತೆಯಿದೆ.
ಶಾಲೆಗಳಿಗೆ ರಜೆ: ಚಂಡಮಾರುತ ಮತ್ತು ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪುದುಚೇರಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಪುದುಚೇರಿ ಶಿಕ್ಷಣ ಸಚಿವ ಅರುಮುಗಂ ನಮಸ್ಶಿವಾಯಂ ಮಾಹಿತಿ ನೀಡಿದ್ದಾರೆ. ದಿಂಡಿಗಲ್ ಜಿಲ್ಲೆಯ ಕೊಡೈಕೆನಾಲ್, ನಾಗಪಟ್ಟಣಂ, ಚೆನ್ನೈ, ಚೆಂಗಲ್‌ಪೇಟ್, ಅರಿಯಲೂರ್ ಮತ್ತು ಕಾಂಚೀಪುರಂಗಳಲ್ಲಿಯೂ ಶಾಲೆಗೆ ರಜೆ ಘೋಷಿಸಲಾಗಿದೆ.
ಈ ನಡುವೆ ಭಾರತೀಯ ನೌಕಾ ಪಡೆ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ದವಾಗಿದೆ.
ಇದನ್ನು ಓದಿ:ಕೊನೆಗೂ ಇಸ್ರೇಲ್, ಹಿಜ್ಬುಲ್ಲಾ ಮಧ್ಯೆ 60 ದಿನಗಳ ಕದನ ವಿರಾಮ ಜಾರಿ
ಗಮನ ಸೆಳೆಯುತ್ತಿರುವ ಬೀಳುವ ಮನೆ: ಒಬ್ಬನೇ 20 ವರ್ಷಗಳಿಂದ ಕೈಯಿಂದಲೇ ನಿರ್ಮಿಸಿದ ಕಟ್ಟಡವಿದು!