ನವದೆಹಲಿ : ಡೆಸ್ಕ್ ಟಾಪ್ ಗಳು, ನೋಟ್ ಬುಕ್ ಗಳು ಮತ್ತು ವರ್ಕ್ ಸ್ಟೇಷನ್ಗಳನ್ನು ಒಳಗೊಂಡ ಭಾರತದ ಸಾಂಪ್ರದಾಯಿಕ ಪಿಸಿ ಮಾರುಕಟ್ಟೆಯು 2024ರ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 2.6 ರಷ್ಟು ಬೆಳವಣಿಗೆಯಾಗಿದೆ ಎಂದು ವರದಿಯೊಂದು ಗುರುವಾರ ತಿಳಿಸಿದೆ. ಈ ಅವಧಿಯಲ್ಲಿ ಭಾರತದಲ್ಲಿ 3.07 ಮಿಲಿಯನ್ (30.07 ಲಕ್ಷ) ಪಿಸಿಗಳು ಮಾರಾಟವಾಗಿವೆ.
ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ಪ್ರಕಾರ, ಡೆಸ್ಕ್ ಟಾಪ್ ಮತ್ತು ವರ್ಕ್ ಸ್ಟೇಷನ್ಗಳ ಮಾರಾಟವು ಕ್ರಮವಾಗಿ ವರ್ಷದಿಂದ ವರ್ಷಕ್ಕೆ ಶೇಕಡಾ 10.1 ಮತ್ತು ಶೇಕಡಾ 2.7 ರಷ್ಟು ಹೆಚ್ಚಾಗಿದೆ. ಹಾಗೆಯೇ ನೋಟ್ ಬುಕ್ಗಳು ಮಾರಾಟ ವರ್ಷದಿಂದ ವರ್ಷಕ್ಕೆ ಶೇಕಡಾ 1.7 ರಷ್ಟು ಕುಸಿದಿದೆ.
ನೋಟ್ ಬುಕ್ಗಳಿಗೆ ಬೇಡಿಕೆ ಕಡಿಮೆಯಾದ ಹೊರತಾಗಿಯೂ ಪ್ರೀಮಿಯಂ ನೋಟ್ ಬುಕ್ಗಳ ($ 1,000 ಕ್ಕಿಂತ ಹೆಚ್ಚು) ಮಾರಾಟ ವರ್ಷದಿಂದ ವರ್ಷಕ್ಕೆ ಶೇಕಡಾ 21 ರಷ್ಟು ಹೆಚ್ಚಾಗಿದೆ. 2023 ರ ಮೊದಲ ತ್ರೈಮಾಸಿಕದಲ್ಲಿ ವೈಯಕ್ತಿಕ ಗ್ರಾಹಕರಿಂದ ಪಿಸಿಗಳ ಖರೀದಿಯು ವರ್ಷದಿಂದ ವರ್ಷಕ್ಕೆ ಶೇಕಡಾ 4.4 ರಷ್ಟು ಬೆಳೆದಿದೆ. ಎಂಟರ್ ಪ್ರೈಸ್ ಆರ್ಡರ್ಗಳಲ್ಲಿ ಕುಸಿತದ ಹೊರತಾಗಿಯೂ ಸರ್ಕಾರಿ ವಿಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 56.9 ರಷ್ಟು ಬೆಳವಣಿಗೆ ಹಿನ್ನೆಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿನ ಪಿಸಿಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 1.3 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೊದಲ ತ್ರೈಮಾಸಿಕದ ಮಾರಾಟದಲ್ಲಿ ಎಚ್ ಪಿ ಶೇಕಡಾ 30.1 ರಷ್ಟು ಪಾಲನ್ನು ಹೊಂದಿದ್ದು, ವಾಣಿಜ್ಯ ಮತ್ತು ಗ್ರಾಹಕ ವಿಭಾಗಗಳಲ್ಲಿ ಅಗ್ರಸ್ಥಾನದಲ್ಲಿದೆ. ಡೆಲ್ ಶೇಕಡಾ 17.5 ರಷ್ಟು ಪಾಲಿನೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ.
ವಿಶ್ಲೇಷಕರ ಪ್ರಕಾರ, ಸಾಂಪ್ರದಾಯಿಕವಾಗಿ ಗಮನಾರ್ಹ ಪ್ರಮಾಣದಲ್ಲಿ ಪಿಸಿಗಳನ್ನು ಖರೀದಿಸುವ ಐಟಿ / ಐಟಿಇಎಸ್ ವಲಯ ಮತ್ತು ಜಾಗತಿಕ ಕಂಪನಿಗಳಿಂದ ಖರೀದಿ ಕಡಿಮೆ ಆಗಿರುವುದರಿಂದ ದೇಶದ ಪಿಸಿ ಮಾರುಕಟ್ಟೆ ವಾಣಿಜ್ಯ ವಿಭಾಗದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.
"ಎಂಟರ್ ಪ್ರೈಸ್ ವಿಭಾಗದಲ್ಲಿ ಹೊಸ ಖರೀದಿಗಳು ಪ್ರಾರಂಭವಾಗುವುದರೊಂದಿಗೆ 2024 ರ ಅಂತ್ಯದ ವೇಳೆಗೆ ಮಾರುಕಟ್ಟೆ ಚೇತರಿಸಿಕೊಳ್ಳಲು ಪ್ರಾರಂಭಿಸುವ ನಿರೀಕ್ಷೆಯಿದೆ. ಮಾರಾಟಗಾರರು ಸ್ಥಳೀಯವಾಗಿ ವಾಣಿಜ್ಯ ನೋಟ್ಬುಕ್ಗಳನ್ನು ತ್ವರಿತವಾಗಿ ಜೋಡಣೆ ಮಾಡುತ್ತಿದ್ದಾರೆ. ಇದು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಆಮದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು ಐಡಿಸಿ ಎಪಿಎಸಿಯ ಸಾಧನಗಳ ಸಂಶೋಧನೆ ವಿಭಾಗದ ಸಹಾಯಕ ಉಪಾಧ್ಯಕ್ಷ ನವಕೇಂದರ್ ಸಿಂಗ್ ಹೇಳಿದರು.
ಇದನ್ನೂ ಓದಿ : ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆಯಲ್ಲಿ ಮಹಿಳೆಯರ ಸಂಖ್ಯೆ ಶೇ. 37ರಷ್ಟು ಏರಿಕೆ! - WOMEN USING INTERNET