ನವದೆಹಲಿ: ಬೃಹತ್ ಡೇಟಾ ಸೆಂಟರ್ ಒಂದನ್ನು ನಿರ್ಮಿಸುವ ಯೋಜನೆಗಾಗಿ ಮೈಕ್ರೋಸಾಫ್ಟ್ ಮತ್ತು ಓಪನ್ಎಐ ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂದು ವರದಿಯಾಗಿದೆ. ಓಪನ್ಎಐನ ಕೃತಕ ಬುದ್ಧಿಮತ್ತೆಗೆ ಶಕ್ತಿ ತುಂಬಲು ಲಕ್ಷಾಂತರ ವಿಶೇಷ ಸರ್ವರ್ ಚಿಪ್ಗಳನ್ನು ಹೊಂದಿರುವ ಸೂಪರ್ ಕಂಪ್ಯೂಟರ್ ತಯಾರಿಸುವುದನ್ನು ಈ ಯೋಜನೆ ಒಳಗೊಂಡಿದೆ. ಈ ಯೋಜನೆಗೆ 100 ಬಿಲಿಯನ್ ಡಾಲರ್ ವೆಚ್ಚವಾಗಬಹುದು ಎಂದು ದಿ ಇನ್ಫಾರ್ಮೇಶನ್ ವರದಿ ಮಾಡಿದೆ.
ಸ್ಟಾರ್ ಗೇಟ್ ಎಂದು ಹೆಸರಿಡಲಾಗಿರುವ ಪ್ರಸ್ತಾವಿತ ಯುಎಸ್ ಮೂಲದ ಸೂಪರ್ ಕಂಪ್ಯೂಟರ್ ತಯಾರಿಕೆಯ ಯೋಜನೆಯ ಖರ್ಚು ವೆಚ್ಚಗಳನ್ನು ಮೈಕ್ರೋಸಾಫ್ಟ್ ಭರಿಸಲಿದೆ. ಸ್ಟಾರ್ ಗೇಟ್ ಸೂಪರ್ ಕಂಪ್ಯೂಟರ್ ಇದು ಸೂಪರ್ ಕಂಪ್ಯೂಟರ್ಗಳ ಸರಣಿಯ ಐದನೇ ಹಂತವಾಗಿದೆ. ಓಪನ್ ಎಐಗಾಗಿ ನಾಲ್ಕನೇ ಹಂತದ ಸೂಪರ್ ಕಂಪ್ಯೂಟರ್ ಅನ್ನು 2026 ರ ಸುಮಾರಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ವರದಿಯ ಪ್ರಕಾರ, ಆಲ್ಟ್ ಮ್ಯಾನ್ ಮತ್ತು ಮೈಕ್ರೋಸಾಫ್ಟ್ ವಿವರಿಸಿದಂತೆ ಯೋಜನೆಯ ಮಾರ್ಗಸೂಚಿಯು ಐದು ವಿಭಿನ್ನ ಹಂತಗಳನ್ನು ಒಳಗೊಂಡಿದೆ. ಐದನೇ ಹಂತದಲ್ಲಿ ಸ್ಟಾರ್ ಗೇಟ್ ಸೂಪರ್ ಕಂಪ್ಯೂಟರ್ನ ತಯಾರಿಕೆಯು ಅತ್ಯುನ್ನತ ಹಂತವಾಗಿದೆ. ಇದಕ್ಕೂ ಮೊದಲು, ಮೈಕ್ರೋಸಾಫ್ಟ್ ಪ್ರಸ್ತುತ ಸಣ್ಣ ಪ್ರಮಾಣದ ಸೂಪರ್ ಕಂಪ್ಯೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು 2026 ರ ಸುಮಾರಿಗೆ ಬಿಡುಗಡೆಯಾಗಲಿದೆ. ಸ್ಟಾರ್ ಗೇಟ್ ಸೂಪರ್ ಕಂಪ್ಯೂಟರ್ 2028ರ ವೇಳೆಗೆ ಸಿದ್ಧವಾಗಬಹುದು ಎಂದು ವರದಿ ತಿಳಿಸಿದೆ.
ಸುಧಾರಿತ ಎಐ ಸಾಮರ್ಥ್ಯಗಳಿಗೆ ಶಕ್ತಿ ತುಂಬಲು ಅಗತ್ಯ ಅಂಶವಾದ ವಿಶೇಷ ಎಐ ಚಿಪ್ಗಳ ಖರೀದಿಯು ಈ ಯೋಜನೆಯ ವೆಚ್ಚಕ್ಕೆ ಕಾರಣವಾಗುವ ಮುಖ್ಯ ಅಂಶವಾಗಲಿದೆ. ಎಐ ಚಿಪ್ಗಳು ಸಾಮಾನ್ಯವಾಗಿ ಬಹಳ ದುಬಾರಿಯಾಗಿರುತ್ತವೆ. ಈ ಬಗ್ಗೆ ಮಾತನಾಡಿದ ಚಿಪ್ ಕಂಪನಿ ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್, ಮಾರ್ಚ್ ಆರಂಭದಲ್ಲಿ ಇತ್ತೀಚಿನ ಬ್ಲ್ಯಾಕ್ ವೆಲ್ ಬಿ 200 ಕೃತಕ ಬುದ್ಧಿಮತ್ತೆಯ ಒಂದು ಚಿಪ್ನ ಬೆಲೆ $ 30,000 ರಿಂದ $ 40,000 ನಡುವೆ ಇರಲಿದೆ ಎಂದು ಹೇಳಿದರು.
ಮೈಕ್ರೋಸಾಫ್ಟ್ ಈ ಯೋಜನೆಗೆ ಹಣಕಾಸು ಒದಗಿಸುವ ನಿರೀಕ್ಷೆಯಿದ್ದು, ಇದು ಕೆಲವು ಅತಿದೊಡ್ಡ ಪ್ರಸ್ತುತ ಡೇಟಾ ಕೇಂದ್ರಗಳಿಗಿಂತ 100 ಪಟ್ಟು ಹೆಚ್ಚು ದುಬಾರಿಯಾಗಲಿದೆ ಎಂದು ದಿ ಇನ್ಫಾರ್ಮೇಶನ್ ವರದಿ ಮಾಡಿದೆ. ಸಾಂಪ್ರದಾಯಿಕವಾಗಿ, ಸೂಪರ್ ಕಂಪ್ಯೂಟರ್ ಗಳನ್ನು ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಇದನ್ನೂ ಓದಿ : ನಾಲ್ಕರಲ್ಲಿ ಓರ್ವ ಯೂಟ್ಯೂಬರ್ ಆದಾಯ ಗಳಿಸುತ್ತಿರುವುದು Shortsನಿಂದ - YouTube Shorts