ಚಾಮರಾಜನಗರ: ಆನೆ ದಾಳಿಗೆ ಯುವಕ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ ಹುಲಿಸಂರಕ್ಷಣ ವ್ಯಾಪ್ತಿಯ ಹನೂರು ತಾಲೂಕಿನ ಕತ್ತೆಕಾಲು ಪೋಡು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಕತ್ತೆಕಾಲು ಪೋಡು ಗ್ರಾಮದ ಮಾದ (23) ಮೃತ ಯುವಕ. ಹಿರಿಯಂಬಲ ಗ್ರಾಮಕ್ಕೆ ಹೋಗಿ ವಾಪಸ್ ನಡೆದುಕೊಂಡು ಬರುತ್ತಿರುವಾಗ ಜಮೀನಿಗೆ ಲಗ್ಗೆ ಇಟ್ಟಿದ್ದ ಆನೆ ದಾಳಿ ನಡೆಸಿ ತುಳಿದು ಸಾಯಿಸಿದೆ.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವಲಯದಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಈ ಸಂಬಂಧ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನಾ ಸ್ಥಳಕ್ಕೆ ಬೆಳಗ್ಗೆ 7.30ರ ಸುಮಾರಿಗೆ ಬೈಲೂರು ಅರಣ್ಯ ವಲಯದ ಆರ್.ಎಫ್.ಓ ಪ್ರಮೋದ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಮುಂದಿನ ಬೆಳವಣಿಗೆ ಬಗ್ಗೆ ನಿಗಾವಹಿಸಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ
ಇದನ್ನೂ ಓದಿ: ಆನೆ ದಾಳಿಯಿಂದ ಕೂದಲೆಳೆಯಲ್ಲಿ ಪಾರಾದ ಕೂಲಿ ಕಾರ್ಮಿಕ: ವಿಡಿಯೋ ವೈರಲ್
ಕಳೆದ ವಾರ ಮೈಸೂರಲ್ಲಿ ಆನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ: ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕೆಬ್ಬೆಪುರ ಹಾಡಿಯ ಬಳಿ ಕರ್ತವ್ಯಕ್ಕೆ ತೆರಳಿದ್ದ ಅರಣ್ಯ ಇಲಾಖೆಯ ವೀಕ್ಷಕರೊಬ್ಬರು ಕಾಡಾನೆ ದಾಳಿಗೆ ಮೃತಪಟ್ಟಿದ್ದರು. ಬಂಡೀಪುರ ಅರಣ್ಯ ವ್ಯಾಪ್ತಿಯ ಮೊಳೆಯೂರು ವಿಭಾಗದ ಕೆಬ್ಬೆಪುರ ಹಾಡಿಯ ನಿವಾಸಿ ಹಾಗೂ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಿ.ರಾಜು (38) ಮೃತ ದುರ್ದೈವಿ ಎಂದು ಗುರುತಿಸಲಾಗಿತ್ತು. ರಾಜು ನಾಗರಹೊಳೆ ಅರಣ್ಯ ಪ್ರದೇಶದ ಉದ್ಬೂರು ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಇಂದು ಬೆಳಗ್ಗೆ ಕೆಲಸಕ್ಕೆ ಸಿದ್ಧರಾಗಿ ಬಸ್ ಹತ್ತಲು ಕೆಬ್ಬೆಪುರದ ಹಾಡಿಯಿಂದ ಮೊಳೆಯೂರಿಗೆ ನಡೆದುಕೊಂಡು ಬರುವ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿ ರಾಜುರನ್ನು ಬಲಿ ಪಡೆದಿತ್ತು.
ಇದನ್ನೂ ಓದಿ: ರಾಮನಗರದಲ್ಲಿ ಕಾಡಾನೆ ತುಳಿತಕ್ಕೆ ಓರ್ವ ಬಲಿ
ರೈತ ಬಲಿ: ಫೆಬ್ರವರಿ ಮೊದಲ ವಾರದಲ್ಲಿ ಕನಕಪುರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಕಾಡಾನೆ ತುಳಿತಕ್ಕೆ ಗೌಡಹಳ್ಳಿ ಗ್ರಾಮದ ರಾಜು (48) ಸಾವಿಗೀಡಾಗಿದ್ದರು. ಗೌಡಳ್ಳಿ ಗ್ರಾಮದಿಂದ ಸುಂಡಗಟ್ಟ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದ ಕಾವೇರಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ರಾಜು ಸೇರಿದಂತೆ 3 ಮಂದಿ ಗೌಡಹಳ್ಳಿ ಸಮೀಪದ ಸಂಗಮ ಅರಣ್ಯ ಪ್ರದೇಶದ ಕಾಡಿಗೆ ಹೋಗಿದ್ದರು. ಈ ವೇಳೆ ರಾಜು ಕಾಡಿನಲ್ಲಿ ದಾರಿತಪ್ಪಿ ಹೋಗಿದ್ದರು. ಮೂವರಲ್ಲಿ ಇಬ್ಬರು ವಾಪಸ್ ಗ್ರಾಮಕ್ಕೆ ಬಂದಿದ್ದರು. ಆದರೆ, ರಾಜು ಪತ್ತೆಯಾಗಿರಲಿಲ್ಲ. ಕಾಡಿನಲ್ಲಿ ಹುಡುಕಾಡಿದಾಗ ಕಾಡಾನೆ ದಾಳಿಗೆ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು.