ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರ ವಿಳಾಸಕ್ಕೆ ಸಂವಿಧಾನ ಪುಸ್ತಕ ಮತ್ತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮತ್ತು ರಾಜ್ಯ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್ ಗೌಡ ಕೊರಿಯರ್ ಮೂಲಕ ಕಳುಹಿಸಿ, ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಬಿ.ವಿ.ಶ್ರೀನಿವಾಸ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕುರಿತು ಮಾಹಿತಿ ಇಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಅವರು ಓದಬೇಕು. ಐತಿಹಾಸಿಕ ಐದು ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ನೀಡಿದೆ. 140 ಕೋಟಿ ಜನರ ಧ್ವನಿಯಾಗಿದೆ ಈ ಪ್ರಣಾಳಿಕೆ. ಸಂವಿಧಾನ ಬದಲಾವಣೆ ಮಾಡುವ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕು. ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಉದ್ಯೋಗಗಳು ಖಾಲಿ ಇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದು ವಾರದಲ್ಲಿ ಈ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಮಹಿಳೆಯರಿಗೆ 1 ಲಕ್ಷ ರೂ ಸಹಾಯ ನಿಧಿ ನೀಡುತ್ತೇವೆ ಎಂದರು.
ಪ್ರಶ್ನೆ ಪತ್ರಿಕೆ ಬಹಿರಂಗವಾಗಿ ಯುವ ಸಮುದಾಯವಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಲಾಗುತ್ತದೆ. ಸಣ್ಣ ವ್ಯಾಪಾರಿಗಳಿಗೆ ಸಹಾಯಧನ, ರೈತರಿಗೆ ಎಮ್.ಎಸ್.ಪಿ ನೀತಿ ಮತ್ತು ಪ್ರತಿ ಜಿಲ್ಲೆಗೆ 5,000 ಕೋಟಿ ರೂ ಅನುದಾನ ಮೀಸಲಿಡುವ ಗ್ಯಾರಂಟಿಯನ್ನು ಕಾಂಗ್ರೆಸ್ ಜಾರಿಗೆ ತರಲಿದೆ ಎಂದು ಹೇಳಿದರು.
ಸುಳ್ಳು, ಭ್ರಷ್ಟಚಾರ, ದ್ವೇಷ ರಾಜಕಾರಣಗಳಲ್ಲಿ ನರೇಂದ್ರ ಮೋದಿ ಚಾಂಪಿಯನ್ ಆಗಿದ್ದಾರೆ. ದೇಶದ ಕಪ್ಪು ಹಣ ವಿದೇಶದಲ್ಲಿ ಶೇಕಡಾ 10ರಷ್ಟು ಹೆಚ್ಚಾಗಿದೆ. ಇದಕ್ಕೆ ಉತ್ತರವಿಲ್ಲ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕುರಿತು ಸುಳ್ಳು ಮಾಹಿತಿ ಹೇಳುತ್ತಿರುವ ಪ್ರಧಾನಿಗೆ ಚುನಾವಣೆ ಆಯೋಗ ನೋಟಿಸ್ ನೀಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಇದನ್ನೂ ಓದಿ: ಬೆಂಗಳೂರು: ಹೋಟೆಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ಠಾಣೆಗೆ ಪತ್ರ - Bomb Threat Letter