ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಮನೆಯಲ್ಲಿ ನಾಡಬಾಂಬ್ ಸ್ಫೋಟಗೊಂಡು ಮಗ ಮೃತಪಟ್ಟು, ತಂದೆ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡನಲ್ಲಾಳ ಗ್ರಾಮದಲ್ಲಿ ನಡೆದಿದೆ. ದೊಡ್ಡನಲ್ಲಾಳ ಗ್ರಾಮದ ಪವನ್ (19) ಮೃತ ಯುವಕ. ಸ್ಫೋಟದ ರಭಸಕ್ಕೆ ಮನೆಯ ಮೇಲ್ಚಾವಣಿ ಛಿದ್ರ ಛಿದ್ರವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಡು ಪ್ರಾಣಿಗಳ ಬೇಟೆಗಾಗಿ ನಾಡಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟಗೊಂಡಿರುವ ಶಂಕೆ ಇದೆ. ಎಫ್ಎಸ್ಎಲ್ ವರದಿ ಬಂದ ನಂತರ ಯಾವ ಕಾರಣಕ್ಕೆ ಸ್ಫೋಟ ಸಂಭವಿಸಿದೆ ಎಂದು ತಿಳಿಯಲಿದೆ ಎಂದರು.
ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಮಧ್ಯಾಹ್ನದ ವೇಳೆಗೆ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಫೋಟ ನಡೆದಿದೆ. ಪ್ರಾಣಿಗಳನ್ನು ಬೇಟೆ ಆಡಲು ಸ್ಫೋಟಕ ತಯಾರು ಮಾಡುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ. ಕಾಡಿನಲ್ಲಿಟ್ಟರೆ ಪ್ರಾಣಿಗಳು ಕಚ್ಚಿದ ಕೂಡಲೇ ಬಾಂಬ್ ಸ್ಫೋಟ ಆಗುತ್ತದೆ. ಅದನ್ನ ತಯಾರು ಮಾಡುವ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಯುವಕನ ಮೃತಪಟ್ಟಿದ್ದಾನೆ. ಆತನ ತಂದೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದರು.