ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ನಿರ್ವಾಹಕನಿಗೆ ಚಾಕು ಇರಿದ ಆರೋಪಿ ಯುವಕನನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಹರಿ ಸಿನ್ಹಾ ಬಂಧಿತ ಆರೋಪಿ.
ವೈಟ್ ಫೀಲ್ಡ್ ಘಟಕದ ಬಿಎಂಟಿಸಿ ವೋಲ್ವೋ ಬಸ್‌ನ ನಿರ್ವಾಹಕನಿಗೆ ಚಾಕು ಇರಿದಿರುವ ಘಟನೆ ಮಂಗಳವಾರ ಐಟಿಪಿಎಲ್ ಬಸ್ ನಿಲ್ದಾಣದ ಬಳಿ ನಡೆದಿತ್ತು. ಕೃತ್ಯದ ಬಳಿಕ ಬಸ್ ಗಾಜುಗಳನ್ನು ಒಡೆದು ಹಾಕಿ, ಚಾಕು ಪ್ರದರ್ಶಿಸುತ್ತಿದ್ದ ಆರೋಪಿಯನ್ನು ಕಂಡು ಇತರ ಪ್ರಯಾಣಿಕರು ಭಯಭೀತರಾಗಿ ಬಸ್‌ನಿಂದ ಇಳಿದು ತೆರಳಿದ್ದರು.
ಬಿಕಾಂ ಪದವೀಧರನಾಗಿದ್ದ ಹರಿ ಸಿನ್ಹಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಕೋಪಗೊಂಡಿದ್ದ ಆರೋಪಿ ಕೆಲಸದಿಂದ ತೆಗೆದಿದ್ದ ಮ್ಯಾನೇಜರ್ಗೆ ಬೆದರಿಸಲು ಚಾಕು ಇಟ್ಟುಕೊಂಡು ತೆರಳಿದ್ದ. ಆದರೆ ಕಂಪನಿಯ ಬಳಿ ಯಾರು ಸಿಗದಿದ್ದಾಗ ಮನೆಗೆ ತೆರಳಲು ಬಸ್ ಹತ್ತಿದ್ದ. ಬಸ್‌ನಲ್ಲಿ ಫುಟ್ ಬೋರ್ಡ್ ಮೇಲೆ ನಿಂತಿದ್ದ ಆರೋಪಿಯನ್ನು ಬಸ್ನೊಳಗೆ ಹೋಗುವಂತೆ ನಿರ್ವಾಹಕ ಯೋಗೇಶ್ ತಿಳಿಸಿದ್ದರು. ಕೋಪದಲ್ಲಿದ್ದ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ನಿರ್ವಾಹಕನಿಗೆ ಇರಿದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ಆರೋಪಿಯನ್ನ ಬಂಧಿಸಿರುವುದಾಗಿ ವೈಟ್ಫೀಲ್ಡ್ ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಗಾಯಾಳು ನಿರ್ವಾಹಕನನ್ನು ವೈಟ್ಫೀಲ್ಡ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಓದಿ: ಸಿಂಧನೂರಲ್ಲಿ ಕಿಡ್ನಾಪ್ ಆಗಿದ್ದ ನಾಲ್ವರು ಮಕ್ಕಳ ರಕ್ಷಣೆ: ಅಂತಾರಾಜ್ಯ ಅಪಹರಣಕಾರರ ಬಂಧನ - Children Kidnap Case