ಬೆಂಗಳೂರು/ಹಾವೇರಿ: ಶಿಗ್ಗಾಂವಿ ಉಪಸಮರಕ್ಕೆ ಕೈ ಅಭ್ಯರ್ಥಿಯಾಗಿ ಯಾಸಿರ್ ಅಹಮದ್ ಖಾನ್ ಪಠಾಣ್ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ. ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿನ್ನೆ ನಿನ್ನೆ ಘೋಷಣೆ ಮಾಡಲಾಗಿತ್ತು.
ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ಅನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಇದೀಗ ಎಐಸಿಸಿ ಯಾಸಿರ್ ಅಹಮದ್ ಖಾನ್ ಪಠಾಣ್ಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಮುಸ್ಲಿಮರಿಗೇ ಟಿಕೆಟ್ ನೀಡುವಂತೆ ಸಚಿವ ಜಮೀರ್ ಅಹಮದ್ ಖಾನ್ ಒತ್ತಡ ಹೇರಿದ್ದರು. ಇತ್ತ ಪಂಚಮಸಾಲಿ ಸಮುದಾಯದವರಿಗೆ ಟಿಕೆಟ್ ನೀಡುವಂತೆ ಒತ್ತಡ ಇತ್ತು. ಹೀಗಾಗಿ, ಶಿಗ್ಗಾಂವಿ ಕ್ಷೇತ್ರದಲ್ಲಿ ಟಿಕೆಟ್ಗಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವ್ ನೀರಲಗಿ, ಮಾಜಿ ಸಚಿವ ಆರ್.ಶಂಕರ್, ಸಯ್ಯದ್ ಅಜ್ಮೀರ್ ಖಾದ್ರಿ, ವಿನಯ್ ಅಸೂಟಿ, ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಹೆಸರುಗಳು ಮುಂಚೂಣಿಯಲ್ಲಿದ್ದವು. ಆದರೆ, ಅಲ್ಪಸಂಖ್ಯಾತರ ಮತ ಗಳಿಸಲು ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸುವುದು ಉತ್ತಮ ಎಂಬುದು ಮುಸ್ಲಿಂ ನಾಯಕರ ಕೂಗಾಗಿತ್ತು. ಕೊನೆಗೆ ಹೈಕಮಾಂಡ್ ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕಿದೆ.
ಬಿಜೆಪಿಯ ಭದ್ರಕೋಟೆಯಾದ ಶಿಗ್ಗಾಂವಿಯಲ್ಲಿ ಗೆಲುವು ಕಾಯ್ದುಕೊಳ್ಳಲು ಬೊಮ್ಮಾಯಿ ಹಾಗೂ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಬೊಮ್ಮಾಯಿ ಅನುಪಸ್ಥಿತಿಯಲ್ಲಿ ಬಿಜೆಪಿ ಭದ್ರಕೋಟೆ ಬೇಧಿಸಲು ಕಸರತ್ತು ನಡೆಸುತ್ತಿದೆ. ಬಿಜೆಪಿಯಿಂದ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಕಣಕ್ಕಿಳಿದಿದ್ದರೆ, ಕಾಂಗ್ರೆಸ್ ಯಾಸಿರ್ ಖಾನ್ ಪಠಾಣ್ಗೆ ಟಿಕೆಟ್ ನೀಡಿದೆ. 2023ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮಾಯಿ ವಿರುದ್ಧ ಯಾಸಿರ್ ಖಾನ್ ಪಠಾಣ್ ಸ್ಪರ್ಧಿಸಿ ಸೋತಿದ್ದರು.
ಸಂಸದ ಬೊಮ್ಮಾಯಿ ಸ್ವಕ್ಷೇತ್ರ, ಬೊಮ್ಮಾಯಿ ವರ್ಚಸ್ಸು, ಪಂಚಮಸಾಲಿ ಮತಬ್ಯಾಂಕ್, ಕಾಂಗ್ರೆಸ್‌ನಲ್ಲಿ ವೀಕ್ ಲೋಕಲ್ ಲೀಡರ್‌ಶಿಪ್, ಬಿಜೆಪಿ ಸಂಘಟನಾ ಬಲ ಮತ್ತು ಮೈತ್ರಿ ಬಲದೊಂದಿಗೆ ಗೆಲುವಿನ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. ಇತ್ತ ಕಾಂಗ್ರೆಸ್ ಪಕ್ಷ ಶಿಗ್ಗಾಂವಿ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವ ಕಸರತ್ತು ನಡೆಸುತ್ತಿದೆ. ಉಪಸಮರದಲ್ಲಿ ಬೊಮ್ಮಾಯಿ ಸ್ಪರ್ಧೆ ಇಲ್ಲದಿರುವುದು, ಅವರ ವಿರುದ್ಧದ ಆಡಳಿತ ವಿರೋಧಿ ಅಲೆ, ಕೆಲ ಆರೋಪಗಳು, ತಮ್ಮದೇ ಸರ್ಕಾರ, ಪಂಚ ಗ್ಯಾರಂಟಿಗಳ ಪ್ರಭಾವ, ಅಹಿಂದ ಮತಗಳ ಬಲದೊಂದಿಗೆ ಶಿಗ್ಗಾಂವಿ ಗೆಲುವಿನ ಲೆಕ್ಕಾಚಾರ ನಡೆಸುತ್ತಿದೆ.
ಸ್ಥಳೀಯ ಕಾಂಗ್ರೆಸ್ ಮುಖಂಡರ ಆಂತರಿಕ ಕಲಹ, ಹೊಂದಾಣಿಕೆ ರಾಜಕಾರಣದ ಭೀತಿಯೂ ಕಾಂಗ್ರೆಸ್ ಪಾಳೆಯದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 8,500 ಮತಗಳ ಮುನ್ನಡೆ ಸಿಕ್ಕಿದ್ದು ಕಾಂಗ್ರೆಸ್ ಗೆಲುವಿನ ವಿಶ್ವಾಸ ಹೆಚ್ಚಿಸಿದೆ.
ಯಾಸಿರ್ ಅಹ್ಮದ್ ಖಾನ್ ಪಠಾಣ್ ಚರಿಚಯ: ಯಾಸಿರ್ ಅಹ್ಮದ್ ಖಾನ್ ಪಠಾಣ್ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಸಲೀಂ ಅಹ್ಮದ್, ಹೆಚ್.ಕೆ. ಪಾಟೀಲ್ ಇತರರೊಂದಿಗೆ ರಾಜಕೀಯ ಒಡನಾಟ ಹೊಂದಿದ್ದಾರೆ.
ರಾಜಕೀಯ ಪಯಣ: 2013ರಲ್ಲಿ ಶಿಗ್ಗಾಂವಿ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಕ್ಕಿರಲಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ-ಸವಣೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಇವರು, ಬಿಜೆಪಿಯ ಬಸವರಾಜ ಬೊಮ್ಮಾಯಿ ವಿರುದ್ಧ ಸೋತಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ನಡೆಸಿದ್ದರು.
ಇದನ್ನೂ ಓದಿ: ನಿಖಿಲ್ ಗೆಲುವಿಗೆ ಒಟ್ಟಿಗೆ ಶ್ರಮಿಸಿ, ದೊಡ್ಡ ಅಂತರದ ಜಯ ಪಡೆಯುತ್ತೇವೆ: ಬಿಎಸ್ವೈ ವಿಶ್ವಾಸ