ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕ್ಯಾಮರಾಮ್ಯಾನ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕ್ರೀಡಾವಾಹಿನಿಯ ಹಿರಿಯ ಕ್ಯಾಮರಾಮ್ಯಾನ್ ಕಮಲನಾಡಿಮುತ್ತು ತಿರುವಳ್ಳುವನ್ ಮೃತ ದುರ್ದೈವಿ. ಶುಕ್ರವಾರ ತಡರಾತ್ರಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಉದ್ಘಾಟನಾ ಪಂದ್ಯದಲ್ಲಿ ತಿರುವಳ್ಳುವನ್ ಕರ್ತವ್ಯ ನಿರ್ವಹಿಸಿದ್ದರು.
ಇಂದು ಬೆಳಗ್ಗೆ ಹಠಾತ್ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ. ಹಿರಿಯ ಕ್ಯಾಮರಾಮ್ಯಾನ್ ನಿಧನಕ್ಕೆ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ, ಕ್ರಿಕೆಟಿಗ ದಿನೇಶ್ ಕಾರ್ತಿಕ್ ಸೇರಿದಂತೆ ಕ್ರಿಕೆಟ್ ಸಮುದಾಯ ಸಂತಾಪ ಸೂಚಿಸಿದೆ. ಸಂಪೂರ್ಣ ಆಘಾತಕಾರಿ ಸುದ್ದಿ. 'ಸದಾ ನಗುತ್ತಲೇ ಇರುತ್ತಿದ್ದ ತಿರು ಒಳ್ಳೆಯ ವ್ಯಕ್ತಿ. ಭೇಟಿಯಾದಾಗಲೆಲ್ಲಾ ಮುಗುಳುನಗೆಯಿಂದಲೇ ನಮ್ಮ ಜೊತೆ ಮಾತನಾಡುತ್ತಿದ್ದರು. ಇದು ಭಯಾನಕ ಸುದ್ದಿ' ಎಂದು ಬೋಗ್ಲೆ ಎಕ್ಸ್ನಲ್ಲಿ ಸಂತಾಪ ಸೂಚಿಸಿದ್ದಾರೆ.
ಅಲ್ಲದೆ ಭಾರತ - ಇಂಗ್ಲೆಂಡ್ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯಕ್ಕೆ ನಿಯೋಜನೆಗೊಂಡಿರುವ ಕ್ಯಾಮರಾಮೆನ್ ಕಪ್ಪುಪಟ್ಟಿ ಧರಿಸುವ ಮೂಲಕ ತಿರುವಳ್ಳುವನ್ ನಿಧನಕ್ಕೆ ತಮ್ಮ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಪಂದ್ಯದ ಬಳಿಕ ಹೃದಯಾಘಾತ: ಕರ್ನಾಟಕದ ಕ್ರಿಕೆಟಿಗ ಸಾವು
ಕಳೆದ ಎರಡು ದಿನಗಳ ಹಿಂದೆ (ಫೆ.22) ತೀವ್ರ ಹೃದಯಾಘಾತದಿಂದ ಕರ್ನಾಟಕದ ಕ್ರಿಕೆಟಿಗ ಹೊಯ್ಸಳ. ಕೆ (34) ಎಂಬುವರು ಮೃತಪಟ್ಟ ಸುದ್ದಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಕ್ಯಾಮರಾಮ್ಯಾನ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟ ಕ್ರಿಕೆಟಿಗ ಹೊಯ್ಸಳ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಬೌಲರ್ ಆಗಿದ್ದು 25 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕ ತಂಡವನ್ನ ಪ್ರತಿನಿಧಿಸಿದ್ದರು. ಅಲ್ಲದೆ ಕರ್ನಾಟಕ ಪ್ರೀಮಿಯಲ್ ಲೀಗ್‌ನಲ್ಲಿಯೂ ಕಣಕ್ಕಿಳಿದಿದ್ದರು.
ಅಂದು ಏನಾಗಿತ್ತು?: ಬೆಂಗಳೂರಿನ ಆರ್.ಎಸ್.ಐ ಮೈದಾನದಲ್ಲಿ ನಡೆಯುತ್ತಿದ್ದ ಏಜಿಸ್ ಸೌತ್ ಝೋನ್ ಟೂರ್ನಿಯ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಹೊಯ್ಸಳ ಕಣಕ್ಕಿಳಿದಿದ್ದರು. ರೋಚಕ ಹಣಾಹಣಿಯಲ್ಲಿ ಜಯ ಗಳಿಸಿದ್ದ ಕರ್ನಾಟಕ ತಂಡದ ಆಟಗಾರರು ಭೋಜನಕ್ಕೆ ತೆರಳುವ ಮುನ್ನ ದಿಢೀರನೇ ಹೊಯ್ಸಳ ಕುಸಿದು ಬಿದ್ದಿದ್ದರು. ತಕ್ಷಣ ಪರಿಶೀಲನೆ ನಡೆಸಿದ ಮೈದಾನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಲು ಯತ್ನಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದಿದ್ದಾಗ ಕೂಡಲೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೊಯ್ಸಳರನ್ನ ತಪಾಸಣೆ ನಡೆಸಿದ ಆಸ್ಪತ್ರೆ ವೈದ್ಯರು, ದಾರಿ ಮಧ್ಯೆಯೇ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರು.