ಹೊಸಪೇಟೆ (ವಿಜಯನಗರ) : ‘ವಿಂಟೇಜ್’ ವಾಹನಗಳ ಶ್ರೀಮಂತ ಪರಂಪರೆಯನ್ನು ನಾಡಿನ ಉದ್ದಗಲಕ್ಕೆ ಪರಿಚಯಿಸುವ ಸಲುವಾಗಿ ಬೆಂಗಳೂರಿನಿಂದ ಹೊರಟ ಕಾರುಗಳು, ಹೊಸಪೇಟೆ ನಗರ ಮತ್ತು ಹಂಪಿಯಲ್ಲಿ ಜನರ ಚಿತ್ತ ತನ್ನತ್ತ ಸೆಳೆದವು.
ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್ ಇಂಡಿಯಾ (ಎಫ್‌ಹೆಚ್‌ವಿಐ) ಸಂಘಟನೆಯು ಬೆಲ್ಜಿಯಂ ಮೂಲದ ಡೆಸ್ಟಿನೇಷನ್ ರ‍್ಯಾಲಿ ಸಂಸ್ಥೆಯ ಜತೆಗೂಡಿ ಈ ವಿಂಟೇಜ್ ಕಾರುಗಳ ಪ್ರವಾಸ ಹಮ್ಮಿಕೊಂಡಿದ್ದು, ದೇಶಾದ್ಯಂತ ಓಡಾಡುತ್ತಿರುವ 20 ಕಾರುಗಳು ಹಾಗೂ ಜಗತ್ತಿನಾದ್ಯಂತ ಓಡಾಡುತ್ತಿರುವ ಇನ್ನೂ 20 ಕಾರುಗಳು ಸೇರಿ ಒಟ್ಟು 40 ಕಾರುಗಳ ಪ್ರವಾಸ ಹಂಪಿಯಲ್ಲಿ ಸಮಾಗಮಗೊಳ್ಳುತ್ತಿದೆ. ಮುಂದೆ ಇವುಗಳು ಚಿಕ್ಕಮಗಳೂರು, ಕೊಡಗು, ಮೈಸೂರು ಮೂಲಕ ಬೆಂಗಳೂರಿಗೆ ಇದೇ 21ರಂದು ವಾಪಸ್ ಆಗಲಿವೆ.
ಯಾವ ಯಾವ ದೇಶದ ಕಾರುಗಳಿವೆ ಗೊತ್ತಾ?: ‘ಇಟಲಿ, ದಕ್ಷಿಣ ಆಫ್ರಿಕಾ, ಲಿಥುವಾನಿಯಾ, ಪೋರ್ಚುಗಲ್, ಐರ್‌ಲೆಂಡ್, ಜರ್ಮನಿ, ಬೆಲ್ಜಿಯಂ, ಫಿನ್ಲೆಂಡ್, ಅಮೆರಿಕ, ನೆದರ್ಲ್ಯಾಂಡ್, ಬ್ರಿಟನ್, ಆಸ್ಟ್ರೇಲಿಯಾಗಳ 20 ಕಾರುಗಳು ಗೋವಾಕ್ಕೆ ಹಡಗಿನಲ್ಲಿ ಬಂದಿದ್ದು, ಹುಬ್ಬಳ್ಳಿ ಮೂಲಕ ಹಂಪಿಯ ಇವಾಲ್ವ್ ಬ್ಯಾಕ್ ರೆಸಾರ್ಟ್ ಅನ್ನು ಶನಿವಾರ ಸಂಜೆ ತಲುಪಲಿವೆ. ಅಲ್ಲಿ ಎರಡೂ ತಂಡಗಳು ಸಮಾಗಮಗೊಂಡು ಭಾನುವಾರ ಬೆಳಗ್ಗೆ ಚಿಕ್ಕಮಗಳೂರಿನತ್ತ ತೆರಳಲಿದ್ದೇವೆ. ವಿಶ್ವ ಪಾರಂಪರಿಕ ತಾಣಗಳಿಗೆ ವಿಂಟೇಜ್ ಕಾರುಗಳನ್ನು ತಂದು ಎರಡೂ ಪರಂಪರೆಗಳನ್ನು ಉಳಿಸುವ ಸಂದೇಶ ಸಾರುವುದೇ ನಮ್ಮ ಪ್ರವಾಸದ ಉದ್ದೇಶ’ ಎಂದು ಎಫ್‌ಹೆಚ್‌ವಿಐ ಅಧ್ಯಕ್ಷ ಡಾ. ರವಿಪ್ರಕಾಶ್ ತಿಳಿಸಿದರು.
‘ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಅವುಗಳೆಲ್ಲ ಬಹಳ ಅತ್ಯಾಕರ್ಷವೂ ಆಗಿವೆ. ಆದರೆ ಕೇರಳ, ಗೋವಾ ಸಹಿತ ಇತರ ಕೆಲವು ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪ್ರವಾಸಿ ತಾಣಗಳತ್ತ ನಾವು ಹೆಚ್ಚು ಗಮನ ಹರಿಸಿಲ್ಲ ಅಥವಾ ಅವುಗಳ ಸೌಂದರ್ಯವನ್ನು ಜಗತ್ತಿಗೆ ತೆರೆದಿಡುವ ಪ್ರಯತ್ನವನ್ನು ಅಷ್ಟಾಗಿ ಮಾಡಿಲ್ಲ ಎಂದೇ ತೋರುತ್ತದೆ. ಈ ವಿಂಟೇಜ್ ಕಾರುಗಳ ಪ್ರವಾಸದಂತಹ ಕಾರ್ಯಗಳಿಂದ ಪ್ರವಾಸೋದ್ಯಮಕ್ಕೆ ಒಂದಿಷ್ಟು ಉತ್ತೇಜನ ಸಿಗುವ ವಿಶ್ವಾಸ ಇದೆ. ಜತೆಗೆ ಇಂತಹ ಇನ್ನಷ್ಟು ಕಾರ್ಯಗಳನ್ನು ಮಾಡುವುದಕ್ಕೆ ಸರ್ಕಾರಕ್ಕೆ ಅವಕಾಶ ಇದೆ. ಪ್ರವಾಸೋದ್ಯಮ ಸಚಿವ ಹೆಚ್. ಕೆ ಪಾಟೀಲ್ ಅವರಲ್ಲಿ ಈ ಬಗ್ಗೆ ನಾವು ಚರ್ಚಿಸಿದ್ದೇವೆ. ಅವರೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ರವಿಪ್ರಕಾಶ್ ಹೇಳಿದರು.
20 ಕಾರುಗಳಲ್ಲಿ 20 ಬಗೆ : ಬೆಂಗಳೂರಿನ ವಿಧಾನಸೌಧದ ಮುಂಭಾಗ ಪ್ರವಾಸೋದ್ಯಮ ಸಚಿವ ಹೆಚ್. ಕೆ ಪಾಟೀಲ್ ಅವರು ಭಾರತದ 20 ವಿಂಟೇಜ್ ಕಾರುಗಳ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಈ ಕಾರುಗಳು ಸಂಜೆ ಹೊಸಪೇಟೆ ತಲುಪಿದ್ದವು. ಇಲ್ಲಿನ ರಾಯಲ್ ಆರ್ಕಿಡ್ ಹೋಟೆಲ್ ಆವರಣದಲ್ಲಿ ಈ ‘ಶತಮಾನದ ಸುಂದರಿ‘ಯರು ಬೆರಗು ಬಿನ್ನಾಣದಿಂದ ನಿಂತಿದ್ದವು.
1926ರ ಬೆಂಟ್ಲಿ ಟೂರರ್, 1933ರ ಆಲ್ವಿಸ್ ಸ್ಪೀಡ್, 1939ರ ಷೆವರ್ಲೆ ಮಾಸ್ಟರ್ ಡಿಲಕ್ಸ್ ಲಿಮೊಸಿನ್, 1947ರ ಸಿಟ್ರೊಯಿನ್ ಟ್ರ್ಯಾಕ್ಷನ್, ಷೆವರ್ಲೆ ಫ್ಲೀಟ್ ಮಾಸ್ಟರ್, 1950ರ ಎಂಜಿ ವೈಟಿ, 1952ರ ಬೆಂಟ್ಲಿ ಎಂಕೆ VI, 1955ರ ಲ್ಯಾಂಡ್ ರೋವರ್ ಸೀರೀಸ್ 1, 1956ರ ಡಾಡ್ಜ್ ಸಬ್‌ಅರ್ಬನ್ ಕಸ್ಟಮ್, 1962ರ ಜಾಗ್ವಾರ್ ಎಂಕೆ II, 1967ರ ಟ್ರಯಂಫ್ ಜಿಟಿ6, 1968ರ ಮರ್ಸಿಡಿಸ್ ಪಗೋಡೆ 280 ಎಸ್‌ಎಲ್, 1969ರ ಅಲ್ಫಾ ರೋಮಿಯೊ ಸ್ಪೈಡರ್, 1970ರ ಮರ್ಸಿಡೆಸ್ 280 ಎಸ್‌ಎಲ್, 1971ರ ಫೋಕ್ಸ್‌ವ್ಯಾಗನ್ ಮೈಕ್ರೊಬಸ್, 1972ರ ಪೋರ್ಷೆ 911, 1974ರ ಜಾಗ್ವಾರ್ ಇ–ಟೈಪ್ V12, 1975ರ ಲ್ಯಾನ್ಸಿಯಾ, 1980ರ ಕಾರ್ವೆಟ್ಟೆ ಸ್ಟಿಂಗ್‌ರೇ ಕಾರುಗಳ ಭವ್ಯ ನೋಟ ವಿಶಿಷ್ಟ ಅನುಭವ ತಂದುಕೊಟ್ಟಿತು.
ಇದನ್ನೂ ಓದಿ : ಕಾಫಿನಾಡಲ್ಲಿ ವಿದೇಶಿ ವಿಂಟೇಜ್ ಕಾರುಗಳ ಕಲರವ: ವಿಡಿಯೋ