ಮಂಗಳೂರು: ತಾಯಿಗೆ ಹೆರಿಗೆಯಾದ ಬಳಿಕ ನವಜಾತ ಶಿಶು ಸಾವನ್ನಪ್ಪಿತ್ತು. ಇದರಿಂದ ತಾಯಿ ತೀವ್ರ ನೊಂದಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಬೇಕಿದ್ದ ಈ ಬಾಣಂತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ನಡೆದಿದೆ.
ಕಾರ್ಕಳ ನಿವಾಸಿ ರಂಜಿತಾ (28) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ರಂಜಿತಾ ಹೆರಿಗೆಗೆಂದು ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರು ಹೈರಿಸ್ಕ್ ಪ್ರಗ್ನೆನ್ಸಿಯಲ್ಲಿದ್ದ ಕಾರಣ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ಈ ಆಸ್ಪತ್ರೆಗೆ ಅ.28ಕ್ಕೆ ದಾಖಲಾಗಿದ್ದರು. ಅ.30ಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೆರಿಗೆಯಾಗಿತ್ತು. ಶಿಶುವನ್ನು ಎನ್ಐಸಿಯುನಲ್ಲಿ ದಾಖಲಿಸಲಾಗಿತ್ತು. ಆದರೆ, ನ.3ಕ್ಕೆ ಶಿಶು ಮೃತಪಟ್ಟಿತ್ತು.
ಬಾಣಂತಿ ರಂಜಿತಾ ಗುಣಮುಖರಾಗಿದ್ದರಿಂದ ಸೋಮವಾರ ಡಿಸ್ಚಾರ್ಜ್‌ಗೆಂದು ವೈದ್ಯರು ಸೂಚಿಸಿದ್ದರು. ಮನೆಯವರು ಕೂಡ ಸಿದ್ಧರಾಗಿ ಬಂದಿದ್ದರು. ಆದರೆ, ರಂಜಿತಾ ಸಾವಿನ ಹಾದಿ ಹಿಡಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕ ದುರ್ಗಾಪ್ರಸಾದ್ ಅವರು, ರಂಜಿತಾ ಅವರು ಹೈರಿಸ್ಕ್ ಪ್ರಗ್ನೆನ್ಸಿ ಕಾರಣದಿಂದ ಕಾರ್ಕಳ ಆಸ್ಪತ್ರೆಯಿಂದ ರೆಫರ್ ಆಗಿ ನಮ್ಮ ಆಸ್ಪತ್ರೆಗೆ ಬಂದಿದ್ದರು. ಅ. 30ಕ್ಕೆ ಹೆರಿಗೆಯಾಗಿದ್ದು ನ.3 ಕ್ಕೆ ಮಗು ಮೃತಪಟ್ಟಿದೆ. ಎರಡು ದಿನದ ಹಿಂದೆ ಅವರು ಡಿಸ್ಚಾರ್ಜ್ ಆಗಬೇಕಿತ್ತು. ಆದರೆ, ಅವರು ಎರಡು ದಿನದ ಕಾಲ ಇಲ್ಲಿಯೇ ಇರುತ್ತೇನೆ ಅಂದಿದ್ದರು. ಇಂದು ಅವರು ಡಿಸ್ಚಾರ್ಜ್ ಆಗಬೇಕಿದ್ದು, ಮನೆಯವರು ಬಂದಿದ್ದರು. ಆದರೆ, ಇದೇ ವೇಳೆ ಅವರು ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರು: ಪತ್ನಿ, ಮಗು ಕೊಂದು ವ್ಯಕ್ತಿ ಆತ್ಮಹತ್ಯೆ