ಚಾಮರಾಜನಗರ: ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗದ ವ್ಯಾಪ್ತಿಯ ಮೊಳೆಯೂರು ವಲಯದ ಹಿಡುಗಲಪಂಚೀ ಕೆರೆ ಬಳಿ ನಡೆದಿದೆ.
ಮೃತ ಹೆಣ್ಣಾನೆಯೂ 25 ರಿಂದ 30 ವರ್ಷ ವಯಸ್ಸಿನದು ಎಂದು ಅಂದಾಜಿಸಲಾಗಿದೆ. ಭಾನುವಾರ ಮಧ್ಯಾಹ್ನ 1ಕ್ಕೆ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ತಿರುಗುವಾಗ ಕಾಡಾನೆಯೊಂದು ಕೆರೆಯ ಸಮೀಪ ಬಿದ್ದಿರುವುದನ್ನು ಗಮನಿಸಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಂಡೀಪುರ ಸಿಎಫ್ಒ ಎಸ್.ಪ್ರಭಾಕರನ್, ಹೆಡಿಯಾಲ ಎಸಿಎಫ್ ಜಿ.ರವೀಂದ್ರ, ಪಶುವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಸ್ಧಳಕ್ಕೆ ಭೇಟಿ ನೀಡಿ, ಕಾಡಾನೆಯನ್ನು ಪರಿಶೀಲಿಸಿದಾಗ ಆನೆಯು ಅನಾರೋಗ್ಯಕ್ಕೆ ಒಳಗಾಗಿದ್ದು ತಿಳಿದುಬಂದಿದೆ. ಈ ಸಂಬಂಧ ಇಲಾಖಾ ವೈದ್ಯರಿಂದ ಚಿಕಿತ್ಸೆ ಮಾಡಿಸಿದರೂ ಸೋಮವಾರದಂದು ಚಿಕಿತ್ಸೆ ಫಲಸದೇ ಆನೆ ಮೃತಪಟ್ಟಿದೆ.
ಮರಣೋತ್ತರ ಪರೀಕ್ಷೆಗಾಗಿ ಕೆಲ ಸ್ಯಾಂಪಲ್ಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಬಳಿಕ ಆನೆಯನ್ನು ಅಲ್ಲಿಯೇ ಹೂಳಲಾಗಿದೆ.
ಇದನ್ನೂ ಓದಿ: ಬಂಡೀಪುರದಲ್ಲಿ ಕಾಡಾನೆ ಸಾವು: ಉನ್ನತ ಮಟ್ಟದ ಸಮಿತಿಯಿಂದ ತನಿಖೆ