ದಾವಣಗೆರೆ : ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿ ಆಗಿದ್ದಾನೆ ಎಂದು ಪಾಪಿ ಹೆಂಡತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ನಡೆದಿದೆ. ಈ ಪ್ರಕರಣವನ್ನು ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇಲಿಯಾಜ್ ಅಹ್ಮದ್ ಹೆಂಡತಿಯಿಂದಲೇ ಕೊಲೆಯಾದ ಪತಿ. ಪ್ರಿಯಕರ ಮಂಜುನಾಥ್, ಹೆಂಡತಿ ಬಿ ಬಿ ಆಯಿಷಾ ಇಬ್ಬರು ಕೊಲೆ ಮಾಡಿದವರು. ಇಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದರ ಸಂಬಂಧ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕೊಲೆ ಮಾಡಿಸಿ ಪತಿ ಕಾಣೆಯಾಗಿದ್ದಾನೆ ಎಂದು ನಾಟಕ ಆಡಿದ್ದ ಪತ್ನಿ : ಆರೋಪಿ ಪತ್ನಿ ಬಿ ಬಿ ಆಯಿಷಾ ತನ್ನ ಗಂಡ ಇಲಿಯಾಜ್ ಅಹ್ಮದ್ನನ್ನು ಕೊಲೆ ಮಾಡಿಸಿ ಫೆ. 23, 2023 ರಂದು ತನ್ನ ಗಂಡ ಕಾಣೆಯಾಗಿರುತ್ತಾನೆ ಎಂದು ಬಸವಪಟ್ಟಣ ಪೊಲೀಸ್ ಠಾಣೆಗೆ ಆಗಮಿಸಿ, ದೂರು ದಾಖಲು ಮಾಡಿದ್ದಳು. ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಲಿಯಾಜ್ ಅಹ್ಮದ್ಗಾಗಿ ಹುಡುಕಾಟ ನಡೆಸಿದ್ದರು.
ಆದರೆ, ಫೆ. 26, 2023 ರಂದು ಮಲೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರಾ ಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಒಂದು ಗಂಡಸಿನ ಅನಾಮಧೇಯ ಶವ ತೇಲಿಕೊಂಡು ಬಂದಿದ್ದರಿಂದಾಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮೃತ ಶವದ ಅಂಗವನ್ನು ಸಂಗ್ರಹಿಸಿ ಡಿ.ಎನ್.ಎ ಫ್ರೊಫೈಲಿಂಗ್ ಮಾಡಿಸಿ ವರದಿ ಪಡೆದುಕೊಂಡಿದ್ದರು.
ಬಸವಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಾಣೆಯಾದ ಇಲಿಯಾಜ್ ಅಹ್ಮದ್ನ ಚಹರೆ, ವಯಸ್ಸು, ಮಲೇಬೆನ್ನೂರು ಠಾಣೆಯ ವ್ಯಾಪ್ತಿಯ ಭದ್ರಾ ಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕ ಅನಾಮಧೇಯ ಶವದ ಪ್ರಕರಣದ ವ್ಯಕ್ತಿಯ ಶವದ ಚಹರೆ ಮತ್ತು ವಯಸ್ಸಿಗೆ ಸಾಮ್ಯತೆ ಕಂಡು ಬಂದಿದೆ.
ಡಿಎನ್ಎ ಹೋಲಿಕೆ ; ಕೊಲೆ ಪ್ರಕರಣ ಭೇದಿಸಿದ ಪೊಲೀಸರು : ಕಾಣೆಯಾಗಿದ್ದ ಇಲಿಯಾಜ್ ಅಹ್ಮದ್ ಇವರ ಮಕ್ಕಳ ರಕ್ತವನ್ನು ಪೊಲೀಸರು ಸಂಗ್ರಹಿಸಿ, ಮೃತ ಅನಾಮಧೇಯ ಶವದ ಹೋಲಿಕೆಗೆ ಆರ್.ಎಫ್.ಎಲ್.ಎಲ್ ಹುಬ್ಬಳ್ಳಿಗೆ ಕಳುಹಿಸಿ ಕೊಡಲಾಗಿತ್ತು. ಅಲ್ಲಿ ಅನಾಮಧೇಯ ಶವದ ಡಿಎನ್ಎಗೂ ಮತ್ತು ಕಾಣೆಯಾದ ಇಲಿಯಾಜ್ ಅಹ್ಮದ್ ಇವರ ಮಕ್ಕಳ ರಕ್ತದ ಡಿಎನ್ಎಗೂ ಹೋಲಿಕೆಯಾಗಿದೆ.
ಅನಾಮಧೇಯ ಶವವು ಕಾಣೆಯಾದ ಇಲಿಯಾಜ್ ಅಹ್ಮದ್ ಮಕ್ಕಳ ತಂದೆ ಎಂದು ಪರೀಕ್ಷಾ ವರದಿ ಬಂದಿದ್ದರಿಂದ ಇದು ಕೊಲೆ ಎಂದು ಮೃತ ಇಲಿಯಾಜ್ ಅಹ್ಮದ್ ಸಹೋದರ ಫೈರೋಜ್ ಅಹ್ಮದ್ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.
ಪತ್ನಿ ತನ್ನ ಗಂಡನನ್ನೇ ಕೊಲೆ ಮಾಡಿಸಿದ್ದು ಹೇಗೆ? : ಮೃತ ಇಲಿಯಾಜ್ ಅಹ್ಮದ್ನ ಸಹೋದರ ಫೈರೋಜ್ ಅಹ್ಮದ್ ನನ್ನ ಅಣ್ಣನನ್ನು ನಮ್ಮ ಅತ್ತಿಗೆ ಬಿ ಬಿ ಆಯಿಷಾ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಬಸವಪಟ್ಟಣ ಗ್ರಾಮದ ಮಂಜುನಾಥನೊಂದಿಗೆ ಸೇರಿಕೊಂಡು, ಯಾವುದೋ ರೀತಿಯಲ್ಲಿ ಕೊಲೆ ಮಾಡಿರಬಹುದು ಎಂದು ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರು ಹೆಂಡತಿ ಬಿ ಬಿ ಆಯಿಷಾ, ಪ್ರಿಯಕರ ಮಂಜುನಾಥ್ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರೋಪಿಗಳಿಬ್ಬರು ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಮೃತನಿಗೆ ಊಟದಲ್ಲಿ ನಿದ್ದೆ ಮಾತ್ರೆ ಕೊಟ್ಟು, ಮೃತನು ನಿದ್ದೆಗೆ ಜಾರಿದಾಗ ದೈಹಿಕ ಸಂಪರ್ಕ ಬೆಳೆಸುತ್ತಿದ್ದರು. ಆರೋಪಿಗಳು ಇಬ್ಬರು ಮೃತ ಇಲಿಯಾಜ್ನನ್ನು ಕೊಂದರೆ ಅಕ್ರಮ ಸಂಬಂಧದಲ್ಲಿ ಚೆನ್ನಾಗಿರಬಹುದೆಂದು ಯೋಚಿಸಿ, ಕೊಲೆ ಮಾಡಲು ಒಳ ಸಂಚು ಮಾಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊಲೆ ಮಾಡಿದ್ದು ಹೇಗೆ ?: ಆರೋಪಿ ಬಿ. ಬಿ ಆಯಿಷಾನ ಪ್ರಿಯಕರ ಮಂಜುನಾಥನು ಮೃತ ಇಲಿಯಾಜ್ನನ್ನು ಕೊಲೆ ಮಾಡುವ ಉದ್ದೇಶದಿಂದ ಫೆ. 23, 2023 ರಂದು ಬೈಕಿನಲ್ಲಿ ಕರೆದುಕೊಂಡು ಸಾಗರಪೇಟೆ ಕ್ಯಾಂಪ್ನಲ್ಲಿದ್ದ ಮುಕುಂದ ಢಾಬಾಕ್ಕೆ ತೆರಳಿದ್ದಾನೆ.
ಅಲ್ಲಿ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಅವನಿಗೆ ಕುಡಿಸಿ, ಬಳಿಕ ಬಲವಂತವಾಗಿ ಕಾಲುವೆಯಲ್ಲಿ ಈಜಾಡಲು ಸಾಗರಪೇಟೆಯ ಭದ್ರಾ ಚಾನಲ್ಗೆ ಕರೆದುಕೊಂಡು ಹೋಗಿದ್ದಾನೆ. ಈಜಾಡಲು ನೀರಿಗಿಳಿಸಿದ್ದಾನೆ. ಮದ್ಯ ಮತ್ತು ನಿದ್ರೆಯ ಮಂಪರಿನಲ್ಲಿದ್ದ ಇಲಿಯಾಜ್ ಈಜಾಡದೇ ಸುಸ್ತಾಗಿ ಮುಳುಗುತ್ತಿರುವ ವೇಳೆ ಆರೋಪಿ ಮಂಜುನಾಥನಿಗೆ ರಕ್ಷಿಸಲು ಕೇಳಿಕೊಂಡಿದ್ದಾನೆ. ಆರೋಪಿ ಮಂಜುನಾಥನು ಅವನನ್ನು ರಕ್ಷಿಸದೇ ನೀರಿನಲ್ಲಿ ಮುಳುಗುವಂತೆ ಮಾಡಿ ಕೊಲೆ ಮಾಡಿರುವುದು ತಿಳಿದು ಬಂದಿರುತ್ತದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ದಾವಣಗೆರೆ: ಹೊಲದಲ್ಲಿ ಮಹಿಳೆ ಶವ ಪತ್ತೆ; ಪತಿಯಿಂದಲೇ ಕೊಲೆ ಆರೋಪ - Woman Found Dead