ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರ ವಿಜಯೋತ್ಸವದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂಬ ಆರೋಪ ಪ್ರಕರಣದಲ್ಲಿ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದಲ್ಲಿ ನಡೆಸಿದ ವಿಚಾರಣೆಯಲ್ಲಿ ವ್ಯಕ್ತಿಯು, "ನಾನು ಯಾವುದೇ ಕಾರಣಕ್ಕೂ ಪಾಕಿಸ್ತಾನ ಪರವಾದ ಘೋಷಣೆ ಕೂಗಿಲ್ಲ. ಎರಡು ಬಾರಿ ನಾಸಿರ್ ಸಾಬ್ ಹಾಗೂ ಒಂದು ಬಾರಿ ನಾಸೀರ್ ಖಾನ್ ಜಿಂದಾಬಾದ್ ಎಂದಷ್ಟೇ ಕೂಗಿದ್ದೇನೆ" ಎಂದು ಹೇಳಿದ್ದಾನೆ.
"ನಾನು ಅನೇಕ ವರ್ಷಗಳಿಂದಲೂ ವ್ಯಾಪಾರ ಮಾಡಿಕೊಂಡು ಬಂದಿದ್ದೇನೆ. ಭಾರತದಲ್ಲಿರುವ ನಾನು ಪಾಕಿಸ್ತಾನ ಪರ ಯಾಕೆ ಘೋಷಣೆ ಕೂಗಲಿ?" ಎಂದು ಆತ ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
"ಸದ್ಯ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ವಿಡಿಯೋಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಎಫ್ಎಸ್ಎಲ್ ಅಧಿಕಾರಿಗಳು ವಿಡಿಯೋಗಳನ್ನು ಪರಿಶೀಲನೆ ನಡೆಸುತ್ತಿದ್ದು ಆದ್ಯತೆಯಾನುಸಾರ ಶೀಘ್ರದಲ್ಲೇ ವರದಿ ನೀಡಲಾಗುವುದು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ: ಫೆಬ್ರವರಿ 27ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ವಿಜಯೋತ್ಸವದ ವೇಳೆ ವ್ಯಕ್ತಿಯೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಧಾನಸೌಧ ಭದ್ರತಾ ವಿಭಾಗದ ಎಸಿಪಿ ಶಿವಕುಮಾರ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಾಯಕರು