ಬೆಂಗಳೂರು : ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ನನಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕೊಟ್ಟಿದ್ದಾರೆ. ನಾವು ಒಗ್ಗಟ್ಟಿನಿಂದ ಕೆಲಸ ಮಾಡಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ನೂತನ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹೇಳಿದ್ದಾರೆ.
ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಅವರು ಲೋಕಸಭೆಯಲ್ಲಿ ಗೆದ್ದು ಕೇಂದ್ರ ಸಚಿವರಾಗಿರುವ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಖಾಲಿಯಾಗಿತ್ತು. ಇದರ ಬಗ್ಗೆ ಪಕ್ಷದ ನಾಯಕರು ಚರ್ಚಿಸಿ ನನಗೆ ಈ ಸ್ಥಾನ ಕೊಟ್ಟಿದ್ದಾರೆ ಎಂದರು.
ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣದ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಪ್ರಜ್ವಲ್ ಕೇಸ್ ಎಸ್ಐಟಿ ತನಿಖೆ ನಡೆಯುತ್ತಿದೆ. ನಮ್ಮ ವರಿಷ್ಠರು ತನಿಖೆ ಅಡ್ಡಿಪಡಿಸುವ ಕೆಲಸ ಮಾಡಲ್ಲ. ಕೋರ್ಟ್ನಲ್ಲಿರುವ ಕಾರಣ ಚರ್ಚೆಗೆ ಅವಕಾಶ ಇಲ್ಲ ಎಂದು ಹೇಳಿದರು. ಪೆನ್ ಡ್ರೈವ್ ಹಂಚಿಕೆ ಮಾಡಿದ್ದ ನವೀನ್ ಗೌಡಗೆ ಎಸ್ಐಟಿ ಪೊಲೀಸರು ಪತ್ರ ಬರೆದಿದ್ದಾರೆ. ಮುಡಾ, ವಾಲ್ಮೀಕಿ ನಿಗಮದ ಹಗರಣಗಳನ್ನ ಡಿಪೆಂಡ್ ಮಾಡೋಕೆ ಆಗಲ್ಲ ಎಂದರು.
ಹಿರಿಯ ನಾಯಕ ಜಿ.ಟಿ.ದೇವೇಗೌಡರ ಜೊತೆ ಮಾತನಾಡಿದ್ದೇನೆ. ನಮ್ಮ ಜೊತೆ ಪೈಪೋಟಿ ಇಲ್ಲ. ಸಾಮಾಜಿಕ ನ್ಯಾಯ ಕೊಡಬೇಕು ಅಂತ ನಾಯಕರು ತೀರ್ಮಾನ ಮಾಡಿದ್ದಾರೆ. ಜೆಡಿಎಸ್ - ಬಿಜೆಪಿ ಮೈತ್ರಿ ಒಟ್ಟಾಗಿ ಕೆಲಸ ಮಾಡುತ್ತವೆ. ಮೈತ್ರಿಕೂಟ ನಾಯಕರು ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡ್ತಾರೆ. ಜಿ.ಟಿ.ದೇವೇಗೌಡರು ಸದನಕ್ಕೆ ಬರ್ತಾರೆ, ಅವರು ಮಾತನಾಡುತ್ತಾರೆ. ಮುಡಾ ಹಗರಣದ ಬಗ್ಗೆ ಮಾಹಿತಿ ಇರುವವರು ಎಲ್ಲರೂ ಮಾತಾಡ್ತಾರೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಶಾಸಕ ಜಿ.ಟಿ.ದೇವೇಗೌಡ ಗೈರಾಗಿದ್ದರು. ಸರ್ಕಾರದ ವಿರುದ್ಧ ಸದನದ ಒಳಗೆ, ಹೊರಗೆ ಹೋರಾಟ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಓದಿ: ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ; ಎಸ್ಐಟಿಯಿಂದ ಮತ್ತೋರ್ವ ಆರೋಪಿ ಅರೆಸ್ಟ್ - Valmiki Corporation Scam