ಹಾಸನ: ''ಕೆಲವು ನಾಯಕರು ಬೇರೆ ಬೇರೆ ಕಾರಣಗಳಿಗೆ ದೂರ ಸರಿದಿದ್ದರು. ಆದ್ರೆ ಈಗ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕೆಂದು ಮರಳಿ ಪಕ್ಷಕ್ಕೆ ಬರುತ್ತಿದ್ದು, ರಾಜ್ಯದಲ್ಲಿ 28ಕ್ಕೆ 28 ಸೀಟು ಗೆಲ್ಲುವ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು" ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ತಿಳಿಸಿದರು.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ''ಮೊನ್ನೆ ರಾಜ್ಯ ಕಾರ್ಯಕಾರಿಣಿ ಸಭೆ ಆಗಿದ್ದು, ಮುಂದಿನ ತಿಂಗಳು ಜಿಲ್ಲಾ ಕಾರ್ಯಕಾರಿಣಿ ಸಭೆಗಳು ನಡೆಯಲಿವೆ. ಲೋಕಸಭಾ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ತೀರ್ಮಾನ ಆಗಲಿದೆ. ಎನ್ಡಿಎ ಅಭ್ಯರ್ಥಿ ಗೆಲ್ಲಬೇಕೆಂದು ದೇವೇಗೌಡ್ರು ಜಿಲ್ಲಾ ಪ್ರವಾಸ ಮಾಡಿದ್ದಾರೆ. ಜೆಡಿಎಸ್ನಿಂದ ಪ್ರಜ್ವಲ್ ಅಭ್ಯರ್ಥಿ ಆಗ್ತಾರೆ. ಆದ್ರೆ, ಪ್ರಜ್ವಲ್ ಎನ್ಡಿಎ ಅಭ್ಯರ್ಥಿ ಎಂದು ಹಿರಿಯರು ಎಲ್ಲಿಯೂ ಹೇಳಿಲ್ಲ. ಅಭ್ಯರ್ಥಿ ಯಾರೆಂದು ಸೀಟು ಹಂಚಿಕೆ ವೇಳೆಯಲ್ಲಿ ತೀರ್ಮಾನ ಆಗಲಿದೆ'' ಎಂದರು.
''ಬಿಜೆಪಿ ತೊರೆದಿದ್ದ ನಾಯಕರು ಮರಳಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಇದು ಸ್ಥಳೀಯ ಚುನಾವಣೆ ಅಲ್ಲ, ದೇಶದ ಚುನಾವಣೆ. ಹಾಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಪಕ್ಷದಿಂದ ಹೊರ ಹೋಗಿದ್ದವರೆಲ್ಲ ವಾಪಸ್ ಬರುತ್ತಿದ್ದಾರೆ. ಪಕ್ಷಕ್ಕೆ ಮರಳುತ್ತಿರುವುದಕ್ಕೆ ಸ್ವಾಗತಾರ್ಹ'' ಎಂದ ಅವರು, ''ರಾಮ ಮಂದಿರ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಿಲುವು ಧಿಕ್ಕರಿಸಿ, ಕೇವಲ ನಾಯಕರಲ್ಲ, ಲಕ್ಷಾಂತರ ಕಾರ್ಯಕರ್ತರು ಬಿಜೆಪಿ ಕಡೆಗೆ ಬರುತ್ತಿದ್ದಾರೆ. ರಾಜ್ಯದಲ್ಲಿ 28 ಕ್ಷೇತ್ರವನ್ನು ಗೆಲ್ಲುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು. ಜಗದೀಶ್ ಶೆಟ್ಟರ್ ನಿನ್ನೆ ಮೊನ್ನೆ ಬಿಜೆಪಿಗೆ ಬಂದವರಲ್ಲ. ಅವರು ಜನ ಸಂಘದ ಕಾಲದಿಂದಲೂ ಇದ್ದವರು. ಹಾಗಾಗಿ ಅವರು ಪಕ್ಷಕ್ಕೆ ಮರಳಿ ಬಂದಿದ್ದಾರೆ. ಇದಕ್ಕೆ ಯಾವುದೇ ಅರ್ಥ ಕಲ್ಪಿಸುವುದು ಬೇಡ'' ಎಂದು ಅವರು ಹೇಳಿದರು.
ಇದನ್ನೂ ಓದಿ: ನಾವು ಹಿಂದೂಗಳ ರಕ್ಷಣೆಗೆ ಸಿದ್ಧ: ಆರ್.ಅಶೋಕ್