ಬೆಂಗಳೂರು: ರಾಜ್ಯ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವಿಸ್ತೃತವಾದ ಚರ್ಚೆಯಾಗಿದ್ದು ಇಂದು ರಾತ್ರಿಯೊಳಗೆ ಅಭ್ಯರ್ಥಿಗಳ ವಿಚಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಿಂದ ವಾಪಸ್ಸಾದ ನಂತರ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ 28 ಕ್ಷೇತ್ರಗಳ ಬಗ್ಗೆಯೂ ಸುದೀರ್ಘ ಚರ್ಚೆ ಆಗಿದೆ. ಪ್ರಧಾನಿ ಮೋದಿ ಸಮಕ್ಷಮದಲ್ಲಿ ಎಲ್ಲ ವಿಷಯಗಳ ಕುರಿತು ಚರ್ಚೆ ಆಗಿದೆ. ಅಂತಿಮವಾಗಿ ಕೆಲವು ಹೆಸರುಗಳನ್ನು ಪ್ರಧಾನಿಯವರು ಮತ್ತು ಅಮಿತ್ ಶಾ ಸೇರಿ ಅಂತಿಮಗೊಳಿಸುತ್ತಾರೆ. ಇವತ್ತು ರಾತ್ರಿಯೊಳಗೆ ಸ್ಪಷ್ಟ ಚಿತ್ರಣ ಹೊರಗೆ ಬರಲಿದೆ ಎಂದರು.
ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ವಿಜಯೇಂದ್ರ ದೆಹಲಿಯಲ್ಲೇ ಇದ್ದಾರೆ. ಮತ್ತೊಂದು ಸುತ್ತಿನ ಚರ್ಚೆ ಆಗಲಿದೆ. ಡಾ.ಮಂಜುನಾಥ್ ಅವರ ಹೆಸರೂ ಚರ್ಚೆಯಲ್ಲಿದೆ. ಆ ಬಗ್ಗೆಯೂ ಇಂದು ತೀರ್ಮಾನವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಕೆಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ನಾನು ಕೆಲವರಿಗೆ ಟಿಕೆಟ್ ಕೈತಪ್ಪುವ ಬಗ್ಗೆ ಇಲ್ಲಿ ಚರ್ಚೆ ಮಾಡಲ್ಲ. ಏನೇ ತೀರ್ಮಾನ ಆಗಬೇಕಾದರೂ ಸಂಜೆ ಏಳೆಂಟು ಗಂಟೆಯೊಳಗೆ ಸ್ಪಷ್ಟ ಚಿತ್ರಣ ಬರಲಿದೆ. ಯಾವುದೇ ಗೊಂದಲ ಇಲ್ಲ. ಎಲ್ಲವೂ ಸುದೀರ್ಘ ಚರ್ಚೆ ಆಗಿದೆ ಎಂದರು.
ಜೆಡಿಎಸ್ಗೆ ಕ್ಷೇತ್ರ ಹಂಚಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ನಮ್ಮ ಎದುರುಗಡೆ ಇದರ ಚರ್ಚೆ ಆಗಿಲ್ಲ. ಆದರೆ, ಹೊಂದಾಣಿಕೆ ಆಗಿಯೇ ಆಗುತ್ತದೆ. ಎಷ್ಟು ಸೀಟು ಕೊಡಬೇಕು ಅಂತ ಹೈಕಮಾಂಡ್ ನಿರ್ಧರಿಸಲಿದೆ. ಅದರಂತೆ ಸುಮಲತಾ ಅವರಿಗೆ ಮಂಡ್ಯ ಟಿಕೆಟ್ ವಿಚಾರ ಸಂಬಂಧ ಮಂಡ್ಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ನಾವು 25ಕ್ಕಿಂತಲೂ ಹೆಚ್ಚು ಸೀಟು ಗೆಲ್ಲುತ್ತೇವೆ. ಇದನ್ನು ಆವತ್ತೂ ಹೇಳಿದ್ದೆ, ಇವತ್ತೂ ಹೇಳಿದ್ದೇನೆ. ಚುನಾವಣೆ ಮುಗಿದ ಮೇಲೆ ಬೇಕಾದರೆ ನನ್ನ ಜತೆ ಮಾತಾಡಿ, ಅಚ್ಚರಿ ಅಭ್ಯರ್ಥಿಗಳ ಬಗ್ಗೆಯೂ ಇವತ್ತು ರಾತ್ರಿಯೇ ಗೊತ್ತಾಗಲಿದೆ ಎಂದ ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಕುರಿತು ಮಾತಾಡಲು ನಿರಾಕರಿಸಿದರು.
ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ, ಯದುವೀರ್ರಿಗೆ ಕೊಟ್ಟರೂ ಸ್ವಾಗತ: ಸಂಸದ ಪ್ರತಾಪ್ ಸಿಂಹ
ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತ ತಲುಪಿದ್ದು, ಕೊನೆ ಕ್ಷಣದ ಬದಲಾವಣೆ ಹೊರತುಪಡಿಸಿ ಪಟ್ಟಿ ಅಂತಿಮಗೊಂಡಿದೆ ಎನ್ನಲಾಗಿದೆ. ನಾಲ್ಕೈದು ಕ್ಷೇತ್ರ ಹೊರತುಪಡಿಸಿ ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಕೆಲ ಹಾಲಿಗಳಿಗೆ ಕೋಕ್ ನೀಡಿ ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಿಂದಲೇ ಕೇಳಿಬರುತ್ತಿವೆ. ರಾಜ್ಯ ನಾಯಕರ ಅಭಿಪ್ರಾಯ, ವೀಕ್ಷಕರ ಸಲಹೆ, ಸಮೀಕ್ಷಾ ವರದಿಗಳು ಹಾಗು ಗೆಲ್ಲುವ ಸಾಮರ್ಥ್ಯದ ಆಧಾರದಲ್ಲಿ ಟಿಕೆಟ್ ಅಂತಿಮಗೊಳಿಸಲಾಗಿದೆ.
ಇನ್ನು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, 'ನನಗೆ ಹೈಕಮಾಂಡ್ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇದೆ' ಎಂದಿದ್ದಾರೆ. 'ನನಗೆ ಈ ಕ್ಷಣಕ್ಕೂ ಕೂಡ ವಿಶ್ವಾಸ ಇದೆ. ಖಂಡಿತ ನಾನು 10 ವರ್ಷಗಳಲ್ಲಿ ಮಾಡಿರುವಂತಹ ಕೆಲಸ, ಕಾರ್ಯಕರ್ತರ ಜೊತೆ ಇರುವಂಥದ್ದು, ಸಂಘಟನೆ ಮತ್ತು ಸಿದ್ಧಾಂತಕ್ಕೆ ನಾನು ನಿಂತಿರುವ ರೀತಿ ಪರಿಗಣಿಸಿ ನನಗೆ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇದೆ. 28 ಜನ ಸಂಸದರು ಇದ್ದೇವೆ. 3 ಪಕ್ಷದವರು ಬೇರೆ ಇದ್ದಾರೆ, ಒಬ್ಬರು ಸ್ವತಂತ್ರರಿದ್ದಾರೆ. ನಮಗೆ ಟಿಕೆಟ್ ನೀಡುವಾಗ ನಾವು ಮಾಡಿರುವಂತಹ ಕೆಲಸಗಳನ್ನು ಪರಿಗಣನೆಗೆ ತೆಗೆದುಕೊಂಡು ಟಿಕೆಟ್ ಕೊಡಬೇಕಾಗುತ್ತದೆ' ಎಂದಿದ್ದಾರೆ.