ಬೆಳಗಾವಿ: "ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳು ಮತ್ತು ಕಾರ್ಯಕರ್ತರ ಶ್ರಮದಿಂದ ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮವಿದೆ. ನಮಗೆ ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರದ ಗೆಲುವು ಪ್ಲಸ್ ಆಗಿದೆ. ಶಿಗ್ಗಾಂವಿಯಲ್ಲಿ ಹಿಂದೂ ಮುಸ್ಲಿಂ ಎಂಬ ಭಾವನೆ ದೂರ ಮಾಡಿದ್ದೇವೆ. ಅಹಿಂದ ಮತ ಚದುರದಂತೆ ನೋಡಿಕೊಂಡೆವು. ವಕ್ಫ್ ವಿವಾದ ಸೃಷ್ಟಿ ಮಾಡಲು ಅವಕಾಶ ನೀಡಲಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು" ಎಂದು ಹೇಳಿದರು.
ಅಹಿಂದ ಮತಗಳು ಒಂದಾಗಿವೆ- ಸತೀಶ್ ಜಾರಕಿಹೊಳಿ: "ಆರಂಭದಲ್ಲಿ ಸಂಡೂರು ಮಾತ್ರ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ, ಮೂರು ಕ್ಷೇತ್ರಗಳಲ್ಲಿ ಅಹಿಂದ ಮತಗಳು ಒಂದಾಗಿವೆ. ಇಲ್ಲಿಯವರೆಗೆ ಬೊಮ್ಮಾಯಿವರಿಗೆ ಅಹಿಂದ ಮತಗಳು ಶೇ.70ರಷ್ಟು ಬರುತ್ತಿದ್ದವು. ಅದನ್ನು ನಾವು ಈ ಬಾರಿ ಬದಲಾವಣೆ ಮಾಡಿದ್ದೇವೆ. ಗೆಲ್ಲುವ ವಿಶ್ವಾಸ ಇತ್ತು. ಪ್ರತಿ ಚುನಾವಣೆಯನ್ನು ನಮ್ಮ ಚುನಾವಣೆ ಎಂದು ಕೆಲಸ ಮಾಡಬೇಕು. ಅದನ್ನು ನಾವು ಮಾಡಿದ್ದೇವೆ. ಶಿಗ್ಗಾಂವಿ ಗೆಲುವು ಮುಸ್ಲಿಂ ಸಮುದಾಯದಕ್ಕೆ ಒಳ್ಳೆಯ ಸಂದೇಶವಾಗಿದೆ. ವಕ್ಫ್ ವಿಚಾರದಲ್ಲಿ ಹಾವೇರಿಯ 650 ಕೇಸ್ಗಳು ಇವೆ. ಆದರೂ ಜನರು ನಮ್ಮನ್ನು ಬೆಂಬಲಿಸಿದ್ದಾರೆ. ಈ ಚುನಾವಣೆ ಗೆಲವು ನಮಗೂ ಒಂದು ಬಡ್ತಿ ಇದ್ದಂತೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇವಿಎಂ ಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಜಾರಕಿಹೊಳಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿ, "ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂ ಯಂತ್ರದ ಬಗ್ಗೆ ಅನುಮಾನ ಇದೆ. ಎಲ್ಲಿಯವರೆಗೆ ಇವಿಎಂ ಇರಲಿದೆಯೋ ಅಲ್ಲಿಯವರೆಗೆ ದೇಶದಲ್ಲಿ ಇದೇ ರೀತಿ ಫಲಿತಾಂಶ ಇರುತ್ತದೆ. ಇವಿಎಂನಲ್ಲೂ ಹೊಂದಾಣಿಕೆ ಇದೆ" ಎಂದು ಆರೋಪಿಸಿದರು.
ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, "ಸಿಎಂ ಬದಲಾವಣೆ ವಿಷಯ ಬರುವುದಿಲ್ಲ. ಇನ್ನು ಕ್ಯಾಬಿನೆಟ್ ಬದಲಾವಣೆ ಬಗ್ಗೆ ಗೊತ್ತಿಲ್ಲ" ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯ ಕ್ಷುಲ್ಲಕ ರಾಜಕಾರಣಕ್ಕೆ ಜನರು ಉತ್ತರಿಸಿದ್ದಾರೆ: "ಬಿಜೆಪಿಯ ಕೋಮು ಆಧಾರಿತ ಕ್ಷುಲ್ಲಕ ರಾಜಕಾರಣ ನಡೆಯಲ್ಲ ಎಂಬ ಸಂದೇಶವನ್ನು ಮೂರು ಕ್ಷೇತ್ರಗಳಲ್ಲಿ ಜನರು ತಮ್ಮ ಮತದಾನದ ಮೂಲಕ ತೋರ್ಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನರು ಸ್ಪಂದಿಸಿದ್ದಾರೆ. ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಸರ್ಕಾರ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರಣೆಯಾಗಿದೆ. ಸಂಡೂರ ಕಾಂಗ್ರೆಸ್ ಗೆದ್ದ ಕ್ಷೇತ್ರವಾಗಿತ್ತು. ಅಲ್ಲಿ ಗೆಲ್ಲುವ ವಿಶ್ವಾಸವಿತ್ತು. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವು ಪಕ್ಷಕ್ಕೆ ಹೆಚ್ಚಿನ ಬಲ ತುಂಬಲಿದೆ. ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿರುವುದು ಬಿಜೆಪಿಯ ಕೋಮು ರಾಜಕಾರಣಕ್ಕೆ ತಕ್ಕ ಪಾಠ ಕಲಿಸಿದಂತಾಗಿದೆ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮೂರು ಕ್ಷೇತ್ರದ ಜನ ಸರ್ಕಾರದ ಮೇಲಿಟ್ಟಿರುವ ವಿಶ್ಚಾಸವೇ ಇಂದಿನ ಫಲಿತಾಂಶ: "ರಾಜ್ಯದ ಜನರು ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ 136 ಸ್ಥಾನ ನೀಡಿ, ಮತ್ತೆ ನಮ್ಮನ್ನು ಗೆಲ್ಲಿಸಿದ್ದಾರೆ. ನೂರಕ್ಕೆ ನೂರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಮೂರು ಕ್ಷೇತ್ರದ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರುತ್ತದೆ. ಪಕ್ಷದ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಕೇವಲ ಆ ಕ್ಷೇತ್ರದ ಜನರಷ್ಟೇ ಅಲ್ಲ. ಬೇರೆ ಕ್ಷೇತ್ರದ ಜನರೂ ಸಹಕಾರ ನೀಡಿದ್ದಾರೆ. ಮೂರು ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. ಚುನಾವಣೆಯ ಗೆಲುವಿಗೆ ಮಹತ್ವದ ಪಾತ್ರ ವಹಿಸಿದ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು. ಯತ್ನಾಳ್ ಅವರಿಗೂ ಸಹ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದು ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ನಾಯಕರ ಸಂತಸ: ಉಪಚುನಾವಣೆ ಗೆಲುವಿನ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಸಚಿವ ಕೆ.ವೆಂಕಟೇಶ್, ಶಾಸಕ ತನ್ವೀರ್ ಸೇಠ್, ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮೂರೂ ಕ್ಷೇತ್ರಗಳ ಜನರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
"ನಮಗೆ ಜನ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮನ್ನಣೆ ನೀಡಿದ್ದಾರೆ. ಸುಳ್ಳನ್ನು ಸತ್ಯ ಮಾಡುವ ಬಿಜೆಪಿ ಜೆಡಿಎಸ್ಗೆ ಜನರು ಸೂಕ್ತ ಉತ್ತರ ಕೊಟ್ಟಿದ್ದಾರೆ. ನಮ್ಮ ಗ್ಯಾರೆಂಟಿಗಳಿಗೆ, ನಮ್ಮ ಸರ್ಕಾರಕ್ಕೆ ಜನ ಬೆಂಬಲ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಒಬ್ಬ ಜನಪರ ರಾಜಕಾರಣಿ. ಇದರ ಬಗ್ಗೆ ಜನರಿಗೆ ತಿಳುವಳಿಕೆ ಇತ್ತು. ಹಾಗಾಗಿ ಈ ಚುನಾವಣೆಯಲ್ಲಿ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಮುಡಾ ಹಗರಣವನ್ನೇ ದೊಡ್ಡದು ಮಾಡಿದ ಬಿಜೆಪಿಗೆ ಜನ ಉತ್ತರ ಕೊಟ್ಟಿದ್ದಾರೆ." ಎಂದು ವಿವರಿಸಿದರು.
"ಬಿಜೆಪಿ ಸುಳ್ಳು ಜನರಿಗೆ ಗೊತ್ತಾಗಿದೆ. ಅದಕ್ಕಾಗಿ ಸುಳ್ಳನ್ನು ಜನರು ತಿರಸ್ಕಾರ ಮಾಡಿದ್ದಾರೆ. ಜನ ಬುದ್ಧಿ ಕಲಿತಿದ್ದಾರೆ. ಕುಟುಂಬ ರಾಜಕಾರಣವನ್ನು ಜನ ಒಪ್ಪಲ್ಲ. ಒಕ್ಕಲಿಗರು ದೇವೇಗೌಡ ಪರ ಇಲ್ಲ ಎಂಬುದು ಫಲಿತಾಂಶದಿಂದ ಗೊತ್ತಾಗುತ್ತದೆ. ಬಿಜೆಪಿ-ಜೆಡಿಎಸ್ ಅನೈತಿಕ ಮೈತ್ರಿಯನ್ನು ತಿರಸ್ಕಾರ ಮಾಡಿದ್ದಾರೆ. ವಕ್ಫ್ ವಿಚಾರ, ಮುಡಾ ಹಗರಣ, ವಾಲ್ಮೀಕಿ ಹಗರಣ ಎಲ್ಲವನ್ನೂ ತೆಗೆದುಕೊಂಡು ವಿಪಕ್ಷಗಳು ಹೊರಟಿದ್ದವು. ಚುನಾವಣೆ ನೆಪಕ್ಕೆ ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿದರು. ಅವರಿಗೆ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರು ಹಾಗೂ ಪಕ್ಷದ ಆಂತರಿಕ ಸಮೀಕ್ಷೆ ಇಂದು ನಿಜವಾಗಿದೆ. ಜನರು ಕೋಮುವಾದಿ ಬಿಜೆಪಿ, ಜೆಡಿಎಸ್ ಅನ್ನು ತಿರಸ್ಕಾರ ಮಾಡಿದ್ದಾರೆ. ಈ ಉಪಚುನಾವಣೆಗಳ ಗೆಲುವು ಸಿದ್ದರಾಮಯ್ಯ ಅವರ ನೈತಿಕ ಗೆಲುವು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೂರು ಕ್ಷೇತ್ರಗಳ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ: ಬಸನಗೌಡ ಪಾಟೀಲ್ ಯತ್ನಾಳ್