ಮೈಸೂರು: ಮಹಾಪ್ರಭುವಿನ ಆಳ್ವಿಕೆ ಪ್ರಾಕೃತಿಕ ನ್ಯಾಯವಲ್ಲ. ಇದು ಅಮಾನವೀಯವಾದುದು. ಇದಕ್ಕೆ ನಾವು ಮೋಸ ಹೋಗಬಾರದು ಎಂದು ನಟ ಪ್ರಕಾಶ್ ರೈ ತಿಳಿಸಿದರು. ದಲಿತ ಸಂಘರ್ಷ ಸಮಿತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ನಿಮಿತ್ತ ಎಂ.ಜಿ.ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಭಾರತ- ಸಂವಿಧಾನ-ಪ್ರಜಾಪ್ರಭುತ್ವದ ಉಳಿವಿಗಾಗಿ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಬದಲಾವಣೆ ವಿರೋಧ ಪಕ್ಷದಿಂದ ಸಾಧ್ಯವಿಲ್ಲ. ಆಳುವ ಪಕ್ಷದಿಂದಲೂ ಆಗುತ್ತಿಲ್ಲ. ನಮ್ಮಿಂದ ಮಾತ್ರವೇ ಬದಲಾವಣೆ ಸಾಧ್ಯ. ಈ ಬಾರಿಯ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು. ಮೊದಲು, ಈ ಕೊರೊನಾ ಸೋಂಕನ್ನು ಕೆಳಗಿಳಿಸೋಣ ಎಂದು ಮನವಿ ಮಾಡಿದರು.
ನಾನು ಬಲಶಾಲಿ ಅಲ್ಲ, ತುಂಬಾ ಬಲಹೀನ ಆಗುತ್ತಿದ್ದೇನೆ ಎನ್ನುವುದು ಗೊತ್ತಾಗಿರುವುದರಿಂದಲೇ ಮಹಾಪ್ರಭುವಿನ ಮುಖದಲ್ಲಿ ಆತಂಕ ಗೋಚರಿಸುತ್ತಿದೆ. 400 ಸ್ಥಾನ ಗಳಿಸುತ್ತೇವೆ ಎನ್ನುತ್ತಾರೆ. ಅದು ಅವರ ನಂಬಿಕೆ ಅಲ್ಲ, ಭಯ. ತುಂಬಾ ವಿಶ್ವಾಸದಿಂದ ಮಾತನಾಡಿದಾಗ, ಪ್ರಶ್ನಿಸುವವರನ್ನು ಜೈಲಿಗೆ ಕಳುಹಿಸಿದಾಗ, ಇಡಿಯಿಂದ ದಾಳಿ ಮಾಡಿಸಿದಾಗ ಅವರು ಹೆದರಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ಇದನ್ನೂ ಓದಿ: 'ಫೋಟೋ' ಅಂತರಂಗ ಬಿಚ್ಚಿಟ್ಟ ಪ್ರಕಾಶ್ ರಾಜ್: ಕೋವಿಡ್ ದಿನಗಳ ನೆನಪಿಸುವ ಚಿತ್ರವಿದು
ಮೈಸೂರಿನ ಮಹಾರಾಜರನ್ನು ನೋಡಲು ದಿಲ್ಲಿಯ ಮಹಾಪ್ರಭು ಬರುತ್ತಾರೆ. ಈ ವಿನೋದ ಪ್ರಸಂಗ ನೋಡಲು ಜನರನ್ನು ಕರೆತರಲು ಸಾಕಷ್ಟು ಬಸ್‌ಗಳು ಓಡಾಡಿದವು. ಆದರೆ, ಕೋವಿಡ್ ಸಂಕಷ್ಟ ಕಾಲದಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರಿಗೇಕೆ ಒಂದು ಬಸ್ ಕೂಡ ಓಡಿಸಲಿಲ್ಲ ಎಂದು ನಾವೆಲ್ಲರೂ ಪ್ರಶ್ನಿಸಬೇಕು ಎಂದರು.
ಮಹಾಪ್ರಭುವಿನ ದಿಲ್ಲಿಯ ಆಸ್ಥಾನಕ್ಕೆ ಬೇಕಿರುವುದು ವಿದೂಷಕರು. ಹೋದ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾದ 27 ಮಂದಿ ಕೂಡ ವಿದೂಷಕರು. ಈ ವಿದೂಷಕರು ಬರ ಪರಿಹಾರ, ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಈಗ ಮಹಾಪ್ರಭು ಮೈಸೂರಿನ ಮಹಾರಾಜರನ್ನೂ ವಿದೂಷಕರನ್ನಾಗಿಸಲು ಹೊರಟಿದ್ದಾರೆ. ಅವರೇಕೆ ಒಪ್ಪಿಕೊಂಡರೋ ನಮಗೆ ಗೊತ್ತಿಲ್ಲ. ಆದರೆ, ಅವರನ್ನು ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಇದನ್ನೂ ಓದಿ: '420 ನಂಬರ್ ಇರೋರು 400+ ಬಗ್ಗೆ ಮಾತಾಡ್ತಾರೆ': ಪ್ರಕಾಶ್ ರಾಜ್
ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ಹಾದಿ ತಪ್ಪಿದ್ದಾರೆ ಎಂದು ಕುಮಾರಣ್ಣ ಹೇಳಿಕೆ ನೀಡಿದ್ದಾರೆ. ನೀವು ದಾರಿ ತಪ್ಪಿ ಎಷ್ಟು ವರ್ಷವಾಯಿತು? ಎಲ್ಲಿ ಓಡಾಡಿಕೊಂಡಿದ್ದೀರಿ, ಇನ್ನೂ ಒಂದ್ಕಡೆ ಸೇರಿಕೊಂಡಿಲ್ಲವಲ್ಲ? ಎಂದು ಲೇವಡಿ ಮಾಡಿದರು. ಸಂವಿಧಾನವನ್ನು ಅಂಬೇಡ್ಕರ್ ಅಲ್ಲದೇ ಬೇರೆ ಯಾರಾದರೂ ರಚಿಸಿದ್ದರೆ ಏನಾಗುತ್ತಿತ್ತು? ಸಂವಿಧಾನದ ಪೀಠಿಕೆಯಲ್ಲಿನ ಆಶಯಗಳು ಕಾನೂನಲ್ಲ. ಅವಮಾನಕ್ಕೆ, ಹಸಿವಿಗೆ ಹುಟ್ಟಿದ್ದದು. ಧಾರ್ಮಿಕ ಕ್ರೌರ್ಯದ ಪರಿಣಾಮಕ್ಕೆ ಹುಟ್ಟಿದ್ದದು. ಸಂವಿಧಾನವನ್ನು ನಾವು ಕೊಂಡಾಡಬೇಕು, ಸಂಭ್ರಮಿಸಬೇಕು ನಿಜ. ಆದರೆ, ಕಾಲ ಹಾಗಿಲ್ಲ. ಅದನ್ನು ಉಳಿಸಿಕೊಳ್ಳಬೇಕಾದ ಸ್ಥಿತಿಗೆ ನಾವು ಬಂದಿದ್ದೇವೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ನರೇಂದ್ರ ಮೋದಿ ಈ ಚುನಾವಣೆಯ ಮೂಲಕ 3ನೇ ಬಾರಿ ಪ್ರಧಾನಿಯಾದರೆ ನಾವೆಲ್ಲರೂ ಬೆಂಕಿಯಲ್ಲಿ ಬೇಯುವಂತಹ ಪರಿಸ್ಥಿತಿ ನೋಡಬೇಕಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಗತಿಪರ ಚಿಂತಕರಾದ ಎಸ್.ತುಕಾರಾಂ, ಬಸವರಾಜ ದೇವನೂರು, ರಂಗಕರ್ಮಿ ಹೆಚ್.ಜನಾರ್ಧನ್ (ಜನ್ನಿ), ದಸಂಸ ಜಿಲ್ಲಾ ಸಂಚಾಲಕರಾದ ಹೆಗ್ಗನೂರು ನಿಂಗರಾಜು, ಶಂಭುಲಿಂಗಸ್ವಾಮಿ, ಮುಖಂಡರಾದ ಬೆಟ್ಟಯ್ಯ ಕೋಟೆ ಮತ್ತಿತರರು ಇದ್ದರು.
ಇದನ್ನೂ ಓದಿ: ಸರ್ವಾಧಿಕಾರಿ ಮಹಾಪ್ರಭುವನ್ನು ಅಧಿಕಾರದಿಂದ ಕೆಳಗಿಳಿಸಿ: ಮೋದಿ ವಿರುದ್ಧ ನಟ ಪ್ರಕಾಶ್ರಾಜ್ ವಾಗ್ದಾಳಿ - Prakash Raj