ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು, ಅಭ್ಯರ್ಥಿಗಳು ಮತದಾನ ಮಾಡಿದ್ರು. ಮೊದಲ ಬಾರಿಗೆ ಮತದಾನ ಮಾಡಿದ ಯುವಜನತೆ ಸಂತೋಷ ವ್ಯಕ್ತಪಡಿಸಿದರು. ಇದರ ಜೊತೆಗೆ ಹಿರಿಯರು ವ್ಹೀಲ್ ಚೇರ್ನಲ್ಲಿ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು.
ಕುಲದೇವತೆಗೆ ಪೂಜೆ ಸಲ್ಲಿಸಿ ಮತದಾನ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಶಿಕಾ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಜೊತೆಯಾಗಿ ನಾಡ ಅಧಿದೇವತೆ ಹಾಗೂ ಕುಲದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ ಬಳಿಕ ಶಂಕರಮಠ ರಸ್ತೆಯಲ್ಲಿರುವ ಶ್ರೀಕಾಂತ ಶಾಲೆಗೆ ಆಗಮಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
ಈ ವೇಳೆ ಮಾಧ್ಯಮಗಳ ಜೊತೆ ಮಾತಾನಾಡಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಮತದಾನ ಮಾಡುವುದು 5 ವರ್ಷಕ್ಕೊಮ್ಮೆ ಸಿಗುವ ಹಕ್ಕು ಆಗಿದ್ದು, ಇದನ್ನ ಎಲ್ಲರೂ ತಪ್ಪದೇ ಮಾಡಬೇಕು. ಇದು ನಮ್ಮ ಕರ್ತವ್ಯ. ಈ ಬಾರಿ ಮಗ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಸಂತೋಷವಾಗಿದೆ. ನಮಗೆ ಚುನಾವಣೆ ಹೊಸದಲ್ಲ. ಆದರೂ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಮೇಲೆ ಒಳ್ಳೆಯ ಕೆಲಸ ಮಾಡು ಅಂತಾ ಹೇಳಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಮಾತಾನಾಡಿದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದು ಸಂತೋಷವಾಗಿದೆ. ಪ್ರತಿ ಬಾರಿಯೂ ಮತ ಚಲಾಯಿಸುತ್ತ ಇದ್ದೆ. ಈ ಬಾರಿ ಮತ ಚಲಾಯಿಸಿದ್ದು ವಿಶೇಷವಾಗಿದ್ದು, ತಪ್ಪದೇ ಎಲ್ಲರೂ ಮತದಾನ ಮಾಡಿ. ಅದರಲ್ಲಿ ಯುವಜನತೆ ಹೆಚ್ಚಾಗಿ ಮತದಾನ ಮಾಡಿ ಎಂದು ಕರೆ ನೀಡಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಇದೆ ಎಂದು ಹೇಳಿದರು.
ಮೊದಲ ಬಾರಿಗೆ ಮತದಾನ ಮಾಡಿದ ಯುವ ಜನತೆ: ಮೊದಲ ಬಾರಿಗೆ ಮತದಾನ ಮಾಡಿದ್ದು ತುಂಬಾ ಖುಷಿಯಾಗಿದೆ. ವೋಟ್ ಮಾಡಬೇಕು ಎಂದು ಬೆಳಗ್ಗೆ ಬೇಗ ಎದ್ದು ರೆಡಿ ಆಗಿ ಬಂದಿದೆವು. ಮತದಾನ ಮಾಡುವುದು ನಮ್ಮ ಹಕ್ಕು. ಆ ಮೂಲಕ ನಾವು ಆಯ್ಕೆ ಮಾಡಿದ್ದ ಜನನಾಯಕರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿಯಲು ಸಹಾಯಕವಾಗುತ್ತದೆ ಎಂದರು.
ಮತದಾನ ಮಾಡುವ ಮೂಲಕ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಆ ಮೂಲಕ ದೇಶಕ್ಕೆ ಒಳ್ಳೆಯ ನಾಯಕರನ್ನ ಆಯ್ಕೆ ಮಾಡಬೇಕು. ಮತದಾನ ನಮ್ಮ ಹಕ್ಕು. ಮೊದಲ ಬಾರಿಗೆ ಮತದಾನ ಮಾಡಿದ್ದು ತುಂಬಾ ಖುಷಿಯಾಗಿದೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು ಸಹೋದರಿಯರಾದ ಹಂಷಿಣಿ ಹಾಗೂ ಹಿಮ್ಮಣಿ.
ಇದೇ ಸಂದರ್ಭದಲ್ಲಿ 101 ವರ್ಷದ ತಿಮ್ಮಮ್ಮ ಆಟೋದಲ್ಲಿ ಬಂದು ಮತ ಚಲಾಯಿಸಿದರು. ಬಳಿಕ 84 ವರ್ಷದ ನಿವೃತ್ತ ವಿಜ್ಞಾನಿ ಅಶೋಕ್ ಮಜಲಿ ಅವರು ವ್ಹೀಲ್ ಚೇರ್ನಲ್ಲಿ ಆಗಮಿಸಿ ಮತ ಚಲಾಯಿಸಿದ್ದು ವಿಶೇಷ. ಒಟ್ಟಾರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೇ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದರಲ್ಲೂ ಯುವ ಜನತೆ ಹೆಚ್ಚಾಗಿ ಮತದಾನ ಮಾಡಲು ಆಗಮಿಸುತ್ತಾ ಇರುವುದು ವಿಶೇಷವಾಗಿದೆ.
ಓದಿ: ಮಂಗಳೂರು: ಮೊದಲ ಬಾರಿಗೆ ಮತದಾನ ಮಾಡುವ ಮೂಲಕ ಸಂತಸ ಹಂಚಿಕೊಂಡ ಯುವತಿಯರು - First Time Voters