ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ 50 ಸಾವಿರ ರೂ.ಗೂ ಹೆಚ್ಚು ದಂಡ ಹೊಂದಿರುವವರ ಮನೆ ಮನೆಗೆ ತೆರಳಿ ಪಾವತಿಸಿಕೊಳ್ಳುವ ಕೆಲಸವನ್ನು ಬೆಂಗಳೂರು ನಗರ ಸಂಚಾರಿ ಪೊಲೀಸರು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ 300ಕ್ಕೂ ಅಧಿಕ ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು ಗೊತ್ತಾಗಿದೆ. ಆತನ ಮೇಲೆ 3.20 ಲಕ್ಷ ರೂಪಾಯಿ ದಂಡ ಹಾಕಲಾಗಿದೆ.
ಸುಧಾಮನಗರ ನಿವಾಸಿ ವೆಂಕಟರಾಮನ್ ಎಂಬವರ KA 05 KF 7969 ನಂಬರಿನ ಹೋಂಡಾ ಆ್ಯಕ್ಟಿವಾ ಸ್ಕೂಟರಿನ ಮೇಲೆ ಮುನ್ನೂರಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿದ್ದವು. ಎಸ್.ಆರ್.ನಗರ, ವಿಲ್ಸನ್ ಗಾರ್ಡನ್ ನಗರದ ವಿವಿಧ ಪ್ರದೇಶಗಳಲ್ಲಿ ಹೆಲ್ಮೆಟ್ ಧರಿಸದೇ, ಸಿಗ್ನಲ್ ಜಂಪ್ ಮಾಡಿರುವ, ಒನ್ ವೇಯಲ್ಲಿ ಸ್ಕೂಟರ್ ಚಲಾಯಿಸಿರುವ, ಚಾಲನೆ ವೇಳೆ ಮೊಬೈಲ್ನಲ್ಲಿ ಮಾತಾಡಿರುವ ಪ್ರಕರಣಗಳಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ.
3.20 ಲಕ್ಷ ರೂ. ದಂಡ ಪಾವತಿಸಬೇಕಿರುವ ವೆಂಕಟರಾಮನ್ ಮನೆಗೆ ಸಂಚಾರಿ ಪೊಲೀಸರು ತೆರಳಿ ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಅಷ್ಟು ದಂಡ ಪಾವತಿಸಲು ಸಾಧ್ಯವಿಲ್ಲ ಎಂದಿರುವ ವೆಂಕಟರಾಮನ್, ಬೇಕಿದ್ದರೆ ಸ್ಕೂಟರ್ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ, ಸ್ಕೂಟರ್ ಬೇಡ, ದಂಡ ಪಾವತಿಸಿ, ಇಲ್ಲವಾದರೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನ ಸವಾರನಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀರಿನ ಟ್ಯಾಂಕರ್ ಚಾಲಕರ ವಿರುದ್ಧ 595 ಪ್ರಕರಣ: ಸಂಚಾರ ಠಾಣೆಯ ಪೊಲೀಸರು ಇತ್ತೀಚೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ನಿಯಮ ಉಲ್ಲಂಘಿಸಿದ್ದ ನೀರಿನ ಟ್ಯಾಂಕರ್ಗಳ ಚಾಲಕರ ವಿರುದ್ಧ ಒಟ್ಟು 595 ಪ್ರಕರಣಗಳನ್ನು ದಾಖಲಿಸಲಾಗಿತ್ತು. ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ, ಸಂಚಾರ ಠಾಣೆ ಪೊಲೀಸರು, 252 ಸಮವಸ್ತ್ರ ಧರಿಸದ ವಾಹನ ಚಾಲನೆ, 134 ನೋ ಎಂಟ್ರಿಯಲ್ಲಿ ವಾಹನ ಸಂಚಾರ, 48 ದೋಷಪೂರಿತ ನಂಬರ್ ಪ್ಲೇಟ್, 40 ಸೀಟ್ ಬೆಲ್ಟ್ ಧರಿಸದಿರುವುದು, 64 ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ, 13 ಕರ್ಕಶ ಹಾರ್ನ್ ಮಾಡಿರುವುದು, 4 ಫುಟ್ ಪಾತ್ ಮೇಲೆ ಪಾರ್ಕಿಂಗ್, 1 ಮದ್ಯಪಾನ ಮಾಡಿ ವಾಹನ ಚಾಲನೆ ಸೇರಿದಂತೆ ಒಟ್ಟು 595 ಪ್ರಕರಣಗಳನ್ನು ದಾಖಲಿಸಿಕೊಂಡು 3.33 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ.
ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆ: ಸವಾರರ ವಿರುದ್ಧ 22 ಕ್ರಿಮಿನಲ್ ಪ್ರಕರಣಗಳು ದಾಖಲು