ಬೆಂಗಳೂರು: ವಾಣಿಜ್ಯ ಸಂಕೀರ್ಣದಲ್ಲಿ ಆಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಸಂಕೀರ್ಣದ ಮಾಲೀಕ, ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ಮಂಗಳವಾರ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣ ರದ್ದು ಕೋರಿ ಬಿ.ಎಸ್.ಸುರೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ನಡೆಸಿ, ಈ ಆದೇಶ ನೀಡಿತು.
2018ರ ಜ.31ರ ನಂತರ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದರೆ 2017 ಮತ್ತು 2018ರಲ್ಲಿ ಪರಿಶೀಲನೆ ನಡೆಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 468ರ ಪ್ರಕಾರ ಘಟನೆ ನಡೆದ ಬಗ್ಗೆ ಪರಿಶೀಲಿಸಿದ ಆರು ತಿಂಗಳಲ್ಲಿ ದೂರು ದಾಖಲಿಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ 13 ತಿಂಗಳ ನಂತರ 2019ರಲ್ಲಿ ದೂರು ದಾಖಲಿಸಲಾಗಿದೆ. ಹೀಗಾಗಿ ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ, ದೂರು ದಾಖಲಿಸಿದ ದಿನದಿಂದ ಲಿಮಿಟೇಷನ್ ಅವಧಿ ಪರಿಗಣಿಸಲಾಗುತ್ತದೆಯೇ ಹೊರತು ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡ ದಿನಾಂಕದಿಂದ ಅಲ್ಲ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿತು.
ಪ್ರಕರಣದ ಹಿನ್ನೆಲೆ ಹೀಗಿದೆ: ಕಾಂಗ್ರೆಸ್ ಪಕ್ಷದಿಂದ 2014ರಲ್ಲಿ ಶಾಸಕರಾಗಿದ್ದ ಬೈರತಿ ಸುರೇಶ್ 2005ರಲ್ಲಿ ನಿರ್ಮಾಣ ಮಾಡಲಾಗಿದ್ದ ವಾಣಿಜ್ಯ ಸಂಕೀರ್ಣವನ್ನು ಖರೀದಿಸಿದ್ದರು. ಇದರಲ್ಲಿ ಅಗ್ನಿಶಾಮಕ ನಿಯಮಗಳು ಪಾಲನೆಯಾಗಿಲ್ಲ ಎಂದು 2017ರಲ್ಲಿ ಒಮ್ಮೆ ಮತ್ತು 2018ರಲ್ಲಿ ಎರಡು ಸಲ ಆಗ್ನಿಶಾಮಕ ದಳದ ಅಧಿಕಾರಿಗಳು ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, 13 ತಿಂಗಳು ತಡವಾಗಿ 2019ರ ಏ.2ರಂದು ಅಗ್ನಿ ಶಾಮಕ ಕಾಯಿದೆ ಸೆಕ್ಷನ್ 25 ಮತ್ತು ಐಪಿಸಿ ಸೆಕ್ಷನ್ 285ರಡಿ ಪೊಲೀಸರಿಗೆ ದೂರು ನೀಡಿದ್ದರು. ಆ ನಂತರ ಪೊಲೀಸರು ತನಿಖೆ ನಡೆಸಿ 2019ರ ಅ.11ರಂದು ಆರೋಪಪಟ್ಟಿ ಸಲ್ಲಿಸಿದ್ದರು. 2023ರಲ್ಲಿ ವಿಚಾರಣಾ ನ್ಯಾಯಾಲಯ ಸುರೇಶ್ ವಿರುದ್ಧ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಅಗ್ನಿಶಾಮಕ ದಳ ಕಾಯಿದೆ ಉಲ್ಲಂಘನೆ ಆರೋಪ: ಸಚಿವ ಬೈರತಿ ಸುರೇಶ್ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್