ಬೆಳಗಾವಿ: ರಾಜ್ಯ ಅಷ್ಟೇ ಅಲ್ಲದೆ ದೇಶದಲ್ಲಿ ಸದ್ದು ಮಾಡಿ ಗಮನ ಸೆಳೆದಿದ್ದ ಬೆಳಗಾವಿ ತಾಲೂಕಿನ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಮಾನವಿಯವಾಗಿ ಹಲ್ಲೆ ಮಾಡಿದ ಘಟನೆಗೆ ಪ್ರಮುಖ ಕಾರಣವಾಗಿದ್ದ ಪ್ರೇಮಿಗಳು ಕೊನೆಗೂ ವಿವಾಹವಾಗಿದ್ದಾರೆ.
ಬೆಳಗಾವಿ ದಕ್ಷಿಣ ವಲಯದಲ್ಲಿರುವ ಉಪನೋಂದಣಿ ಕಚೇರಿಯಲ್ಲಿ ಪ್ರೇಮಿಗಳಿಬ್ಬರು ಕಾನೂನು ಪ್ರಕಾರ ಮಂಗಳವಾರ ವಿವಾಹವಾಗಿದ್ದಾರೆ. ವಂಟಮೂರಿ ಗ್ರಾಮದಲ್ಲಿರುವ ಯುವಕ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಯುವತಿ ಮನೆಯವರಿಗೆ ತಿಳಿಯುತ್ತಿದಂತೆ ಬೇರೆ ಸಂಬಂಧ ಹುಡುಕಿದ್ದರು. ಅಲ್ಲದೇ ಡಿ.11 ರಂದು ಯುವತಿಯ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಿಗದಿಪಡಿಸಿಕೊಂಡಿದ್ದರು. ಈ ವಿಷಯ ತಿಳಿದು ಪರಸ್ಪರ ಪ್ರೀತಿಸುತ್ತಿದ್ದ ಯುವಕ ಯುವತಿ ರಾತ್ರೋರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದರು. ಬಳಿಕ ವಿಷಯ ತಿಳಿದ ಯುವತಿಯ ಮನೆಯವರು ಆಕ್ರೋಶಗೊಂಡ ರಾತ್ರೋರಾತ್ರಿ ಯುವಕನ ಮನೆಗೆ ತೆರಳಿ ಮನೆಯನ್ನು ಸಂಫೂರ್ಣವಾಗಿ ಧ್ವಂಸ ಮಾಡಿದ್ದರು. ಜತೆಗೆ ಯುವಕ ತಾಯಿಯನ್ನು ವಿವಸ್ತ್ರಗೊಳಿಸಿ, ಅಮಾನವೀಯವಾಗಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು.
ರಾಜ್ಯ ಅಷ್ಟೇ ಅಲ್ಲದೇ ಈ ಸುದ್ದಿ ದೇಶಾದ್ಯಂತ ಸದ್ದು ಮಾಡಿತ್ತು. ಜತೆಗೆ ಈ ಘಟನೆಯನ್ನು ಎಲ್ಲರೂ ತೀವ್ರವಾಗಿ ಖಂಡಿಸಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯದ ಮಹಿಳಾ ಆಯೋಗ, ಪೊಲೀಸರು, ಸಿಐಡಿ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದರು. ಈ ಘಟನೆಗೆ ಪ್ರಮುಖ ಕಾರಣರಾಗಿದ್ದ ಪ್ರೇಮಿಗಳನ್ನು ಪೊಲೀಸರು ರಕ್ಷಣೆ ಮಾಡಿ, ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರು. ಪರಿಸ್ಥಿತಿ ಶಾಂತವಾದ ಬಳಿಕ ಪ್ರೇಮಿಗಳಿಬ್ಬರು ರಿಜಿಸ್ಟರ್ ಮದುವೆ ಆಗಿದ್ದಾರೆ.
ಇದನ್ನೂ ಓದಿ: ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದ ಪ್ರಕರಣ ಸಿಐಡಿಗೆ ಹಸ್ತಾಂತರ