ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮದಲ್ಲಿ ಯಾವುದೋ ಕಂಪನಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಕೋಟಿ ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿರುವುದು ಎಸ್ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ. ವಂಚಕರ ತಂತ್ರದಿಂದ ಅಸಲಿ ಕಂಪನಿಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ವಿವಿಧ ಕಂಪನಿಗಳ ಮಾಲೀಕರ ಗಮನಕ್ಕೆ ಬಾರದಂತೆ ಅವುಗಳ ದಾಖಲೆಗಳನ್ನು ಬಳಸಿರುವ ವಂಚಕರು, ಆ ದಾಖಲೆಗಳನ್ನು ಬಳಸಿಕೊಂಡು ನಕಲಿ ಖಾತೆ ತೆರೆದು ಕೋಟ್ಯಂತರ ರೂ. ವಹಿವಾಟು ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ, ಹಣ ವರ್ಗಾವಣೆಯಾದ ಖಾತೆಯ ಕಂಪನಿಗಳ ಮಾಲೀಕರನ್ನು ಪತ್ತೆ ಹಚ್ಚಿ ವಿಚಾರಣೆ ಕೈಗೊಂಡಾಗ ಈ ವಿಷಯ ಬಹಿರಂಗವಾಗಿದೆ.
ಅನೇಕ ಮಾಲೀಕರಿಗೆ ತಮ್ಮ ಕಂಪನಿಗಳ ಹೆಸರಿನಲ್ಲಿ ಬೇರೆ ನಕಲಿ ಖಾತೆಗಳನ್ನು ಸೃಷ್ಟಿಸಿರುವುದೇ ಗೊತ್ತಿಲ್ಲ. ಅದರಲ್ಲಿಯೂ ಆ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆದಿರುವುದು ಗಮನಕ್ಕೇ ಬಂದಿಲ್ಲ ಎಂಬುದು ತಿಳಿದು ಬಂದಿದೆ. ಒಂದೊಂದು ನಕಲಿ ಖಾತೆಯಲ್ಲಿ 5 ಕೋಟಿಯಂತೆ 20 ಕೋಟಿಗೂ ಅಧಿಕ ಹಣದ ವಹಿವಾಟು ನಡೆದಿದ್ದು, ಬಳಿಕ ಅವುಗಳಿಂದ ಹಣ ವಿತ್ ಡ್ರಾ ಮಾಡಿಕೊಳ್ಳಲಾಗಿದೆ.
ಸದ್ಯ ಎಸ್ಐಟಿ ನೀಡಿದ್ದ ನೋಟಿಸ್ ಬಳಿಕ ಅಸಲಿ ವಿಷಯ ತಿಳಿದ ಕಂಪನಿಗಳ ಮಾಲೀಕರು ನೀಡಿರುವ ದೂರಿನನ್ವಯ ನಾಲ್ಕು ಎಫ್ಐಆರ್ ದಾಖಲಾಗಿವೆ. ಕಂಪನಿಗಳ ಮಾಲೀಕರಾದ ವಿಜಯ್ ಕೃಷ್ಣ ಹಾಗೂ ನವೀನ್ ಎಂಬುವವರು ನೀಡಿರುವ ದೂರಿನನ್ವಯ ಕೆಪಿ ಅಗ್ರಹಾರ ಠಾಣೆಯಲ್ಲಿ ರಾಘವೆಂದ್ರ, ರೇಖಾ ಎಂಬುವವರು ನೀಡಿರುವ ದೂರಿನನ್ವಯ ವಿಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಜೀವ ಬೆದರಿಕೆ ಇದೆ ಎಂದು ನ್ಯಾಯಾಧೀಶರ ಮುಂದೆ ಆರೋಪಿ ದೂರು - ST Corporation scam