ಬೆಂಗಳೂರು : ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡದೇ ಕಿಂಚಿತ್ತೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೆಆರ್‌ಎಸ್ ಅಣೆಕಟ್ಟಿನ 20 ಕಿ. ಮೀ ಸುತ್ತಳತೆಯ ವ್ಯಾಪ್ತಿ ಪ್ರದೇಶದಿಂದ ಹೊರಗಿರುವ ಕಾರಣ, ತಮಗೆ ಕ್ರಷಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನ ಮರಡಿ ಗ್ರಾಮದ ಮಂಚಮ್ಮದೇವಿ ಸ್ಟೋನ್ ಕ್ರಷರ್ ಹಾಗೂ ಎಂ. ಸ್ಯಾಂಡ್ ಘಟಕದ ಮಾಲೀಕ ವೈ. ಬಿ ಅಶೋಕ್‌ಗೌಡ ಪಟೇಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ವಿಭಾಗೀಯ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು. ಜತೆಗೆ, ಕೆಆರ್‌ಎಸ್ ಅಣೆಕಟ್ಟು ವ್ಯಾಪ್ತಿಯಲ್ಲಿ ಹಾಗೂ ಅದರಾಚೆಗೂ ಕೂಡಾ ಯಾವುದೇ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟಕ ಚಟುವಟಿಕೆಗಳಿಗೆ ಸಂಬಂಧಿಸಿದ ತಕರಾರುಗಳಿಗೆ ಪರಿಹಾರ ಪಡೆಯಲು ಶಾಸನಾತ್ಮಕವಾಗಿ ರೂಪುಗೊಂಡಿರುವ ಕರ್ನಾಟಕ ರಾಜ್ಯ ಜಲಾಶಯಗಳ ಸುರಕ್ಷಿತ ಸಮಿತಿಯ ಮುಂದೆಯೇ ಮನವಿ ಸಲ್ಲಿಸಬೇಕು. ಈ ವಿಚಾರದಲ್ಲಿ ಸಮಿತಿಯ ತೀರ್ಮಾನವೇ ಅಂತಿಮ ಎಂದು ತಿಳಿಸಿತು.
ಜತೆಗೆ, ಈ ವಿಚಾರದಲ್ಲಿ ತೀರ್ಮಾನ ಪ್ರಕಟಿಸಲು ಕೋರ್ಟ್ ಪರಿಣಿತಿ ಹೊಂದಿಲ್ಲ. ಅದರಂತೆ ಮನವಿಯನ್ನು ಸಮಿತಿ ಮುಂದೆಯೇ ಸಲ್ಲಿಸಿ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿ, ಅರ್ಜಿಯನ್ನು ಇತ್ಯರ್ಥ ಪಡಿಸಿತು. ಅಲ್ಲದೆ, ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳಗಳಿಗೆ ನೀರುಣಿಸುವ ಕಾವೇರಿಯು ಜೀವನದಿಯಾಗಿದೆ. ಕೆಆರ್‌ಎಸ್ ಅಣೆಕಟ್ಟಿನ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಅತ್ಯಂತ ಅಪಾಯಕಾರಿ. ಆದ್ದರಿಂದ, ಅಣೆಕಟ್ಟಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯತೆ ಎದುರಾಗಿದೆ ಎಂದು ಪೀಠ ತಿಳಿಸಿತು.
ಅಣೆಕಟ್ಟಿಗೆ ಏನಾದರೂ ಆದರೆ ಗತಿಯೇನು? ಮುಂದಿನ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದ ನ್ಯಾಯಪೀಠ, ಕೆಆರ್‌ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆಯ ಚಟುವಟಿಕೆಗಳು ಅಪಾಯ ತಂದೊಡ್ಡಬಲ್ಲವು. ಕೆಆರ್‌ಎಸ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಂಬಂಧಿಸಿದ ತಕರಾರುಗಳನ್ನು ಕರ್ನಾಟಕ ರಾಜ್ಯ ಜಲಾಶಯಗಳ ಸುರಕ್ಷಿತ ಸಮಿತಿಯ ಮುಂದೆಯೇ ಮನವಿ ಸಲ್ಲಿಸಬೇಕು. ಆ ಮನವಿಯನ್ನು ತಜ್ಞರ ಸಮಿತಿಯೇ ಪರಾಮರ್ಶಿಸಿ, ಯಾವುದೇ ಕ್ರಮ ಕೈಗೊಳ್ಳಬಹುದು ಎಂದು ಹೇಳಿತು.
ಇದನ್ನೂ ಓದಿ : ವೈದ್ಯಕೀಯ ಕಾಲೇಜಿನ ಅಧೀಕ್ಷಕರಿಗೆ ಆಸ್ಪತ್ರೆಯ HODಯನ್ನಾಗಿ ನೇಮಕ ಮಾಡುವಂತಿಲ್ಲ: ಹೈಕೋರ್ಟ್ - High Court