ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಒಂದು ತಿಂಗಳ ಕಾಲ ನಡೆದ ಭವ್ಯ ಶ್ರೀಕೃಷ್ಣ ಮಾಸೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಾಗವಹಿಸಿ ಶ್ರೀಕೃಷ್ಣನ ದರ್ಶನ ಪಡೆದರು.
ಎರಡು ದಿನದ ಉಡುಪಿ ಪ್ರವಾಸದಲ್ಲಿದ್ದ ಕೇರಳ ರಾಜ್ಯಪಾಲರು, ಕೊಲ್ಲೂರು ಮೂಕಾಂಬಿಕೆ ಹಾಗೂ ಉಡುಪಿಯ ಶ್ರೀ ಕೃಷ್ಣದೇವರ ದರ್ಶನ ಪಡೆದರು. ಇದಕ್ಕೂ ಮುನ್ನ ಶ್ರೀಕೃಷ್ಣ ಮಠದಿಂದ ರಾಜ್ಯಪಾಲರನ್ನು ಆತ್ಮೀಯವಾಗಿ ಸ್ವಾಗತಿಸಿಕೊಳ್ಳಲಾಯಿತು. ಶ್ರೀಕೃಷ್ಣ ಮಠದ ಪರ್ಯಾಯ ಪೀಠಾಧಿಪತಿ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಉಭಯ ಶ್ರೀಪಾದರು ಆರಿಫ್ ಮಹಮ್ಮದ್ ಖಾನ್ ಅವರನ್ನು ಸನ್ಮಾನಿಸಿದರು. ಈ ವೇಳೆ, ಕೋಟಿ ಗೀತಾ ಲೇಖನ ಯಜ್ನಾದೀಕ್ಷೆ ನೀಡಿ ಅನುಗ್ರಹಿಸಿದರು.
ಈ ವೇಳೆ ಶ್ರೀಕೃಷ್ಣ ಮಠದ ಇತಿಹಾಸ ಹಾಗೂ ಪುರಾಣಗಳ ಬಗ್ಗೆ ಆರಿಫ್ ಮಹಮ್ಮದ್ ಖಾನ್ ಆಸಕ್ತಿಯಿಂದ ಕೇಳಿ ತಿಳಿದುಕೊಂಡರು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ನಮ್ಮ ಧರ್ಮಗಳು ಬೇರೆ ಆಗಿರಬಹುದು. ಆದರೆ, ನಾವೆಲ್ಲರೂ ಭಾರತೀಯರು ಮತ್ತು ಒಂದೇ ಸಂಸ್ಕೃತಿಯವರು. ಭಿನ್ನ-ಭಿನ್ನ ಹೆಸರಿನಲ್ಲಿ ದೇವರನ್ನು ಪೂಜಿಸಿದರೂ ಕೊನೆಗೆ ನಮ್ಮೆಲ್ಲರ ಪ್ರಾರ್ಥನೆ ಕೇಶವನಿಗೆ ಸಲ್ಲುವುದು ಎಂದು ಹೇಳಿದರು.
ವಿವಿಧತೆಯಲ್ಲಿ ಏಕತೆ ನಮ್ಮ ಸಂಸ್ಕೃತಿಯ ಆತ್ಮ ಎಂದು ಕೂಡ ಅವರು ಬಣ್ಣಿಸಿದರು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶೀಂದ್ರತೀರ್ಥ ಸ್ವಾಮೀಜಿ, ಹೆಚ್.ಎಸ್. ಬಲ್ಲಾಳ್, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.