ಧಾರವಾಡ: "ರಾಮಮಂದಿರಕ್ಕಾಗಿ ಹೋರಾಟ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಗೊಂದಲದಲ್ಲೇ ಇದೆ. ಅವರಿಗೆ ಸ್ಪಷ್ಟತೆ ಇಲ್ಲ. ದೇಶದ ಹಾಗೂ ಸಮಾಜದ ಹಿತಕ್ಕಿಂತ ವೋಟ್ ಬ್ಯಾಂಕ್ ರಾಜಕೀಯದ ಬಗ್ಗೆ ಅವರು ವಿಚಾರ ಮಾಡುತ್ತಾರೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನ ಪ್ರಾಣ ಪ್ರತಿಷ್ಠಾಪನೆ ದಿನ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು ಎಂಬ ಆಗ್ರಹ ಬಿಜೆಪಿ ನಾಯಕರಿಂದ ಕೇಳಿಬರುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.
"ಅವರದ್ದು ಕನ್ಫ್ಯೂಸ್ಡ್ ಲೀಡರ್ ವಿತ್ ಎ ಕನ್ಫ್ಯೂಸ್ಡ್ ಪಾರ್ಟಿಯಾಗಿದೆ. ಸಿಎಂ ಸಿದ್ದರಾಮಯ್ಯ ನವರು ನಾಳೆ ಸಾರ್ವತ್ರಿಕ ರಜೆ ಘೋಷಣೆ ಬಗ್ಗೆ ರಾಹುಲ್ ಗಾಂಧಿ ಅವರನ್ನ ಕೇಳಿದ್ದಾರೆ. ರಾಹುಲ್ ಗಾಂಧಿ ನಾಳೆ ರಾಮನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ವಿಚಾರ ಮಾಡಿ ನಿರ್ಣಯ ಕೊಡಬಹುದು. ಆಗ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಷ್ಟೊತ್ತಿಗೆ ಕಾರ್ಯಕ್ರಮ ಮುಗಿದು ಹೋಗಿರುತ್ತದೆ. ಈ ರೀತಿ ಗೊಂದಲದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ದೇಶದಲ್ಲಿ ಅವರದ್ದು ಮೂರು ಕಡೆ ಸರ್ಕಾರ ಇದೆ. ಅಲ್ಲಿಯೂ ಕೂಡಾ ಬರುವ ದಿನದಲ್ಲಿ ಇರಲ್ಲ, ರಾಮನ ಶಾಪ ಅವರಿಗೆ ತಟ್ಟುತ್ತದೆ" ಎಂದರು.
"ಈಗ ಅವರಿಗೆ ರಾಮ ಕನಸಲ್ಲಿ ಬಂದಿದ್ದ ಎನ್ನುವುದೇ ಅದ್ಭುತ ಸಂಗತಿ. ಕನಸಲ್ಲಿ ರಾಮ ಬಂದು ಕಾಂಗ್ರೆಸ್ಸಿಗರಿಗೆ ಸದ್ಬುದ್ಧಿ ಬರಲಿ ಎಂದು ಹೇಳಿರಬೇಕು. ರಾಮನ ಪ್ರಾಣ ಪ್ರತಿಷ್ಠಾಪನೆಗೆ ಇಡೀ ಜಗತ್ತಿನಲ್ಲಿ ಎಲ್ಲರೂ ಸಂತೋಷ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ನವರಿಗೆ ರಾಮ ಯಾಕೆ ಹುಚ್ಚರಂತೆ ಮಾಡುತ್ತಿದ್ದೀರಿ ಎಂದು ಕೇಳಿರಬೇಕು. ಅದನ್ನು ಅವರು ಹೇಗೆ ಹೇಳ್ತಾರೆ, ರಾಮನಿಗೂ ಮೋಸ ಮಾಡುವವರು ಇವರು. ಅವರಿಗೆ ರಾಮನೇ ಸದ್ಬುದ್ಧಿ ಕೊಡಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದರು.
ಕುಮಾರಸ್ವಾಮಿ ಜೊತೆ ಯಡಿಯೂರಪ್ಪ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, "ನನಗೂ ಯಡಿಯೂರಪ್ಪನವರು ಕರೆ ಮಾಡಿದ್ದರು. ನಮ್ಮ ರಾಜ್ಯಾಧ್ಯಕ್ಷರು ಇದ್ದಾರೆ. ವಿಧಾನ ಪರಿಷತ್ ಸದಸ್ಯರ ಚುನಾವಣೆ ಕುರಿತು ಚರ್ಚೆ ಆಗುತ್ತಿದೆ. 6 ಎಂಎಲ್ಸಿ ಸೀಟ್ ಇವೆ, ಹೀಗಾಗಿ ಸಭೆ ನಡೆದಿದೆ. ಲೋಕಸಭಾ ಚುನಾವಣಾ ವಿಚಾರವಾಗಿ ಅಲ್ಲಿ ಚರ್ಚೆ ನಡೆದಿಲ್ಲ" ಎಂದರು. ಮಂಡ್ಯ ಟಿಕೆಟ್ ಯಾರಿಗೆ ಎಂಬ ಪ್ರಶ್ನೆಗೆ ಉತ್ತರಿಸಿ, "ಮಂಡ್ಯದ ಬಗ್ಗೆ ಕೂಡಾ ಚರ್ಚೆ ಆಗಿಲ್ಲ. ಯಾವುದೇ ಕ್ಷೇತ್ರವಾಗಲಿ, ಸೂಕ್ತ ಚರ್ಚೆ ನಂತರವೇ ಎಲ್ಲವೂ ನಿರ್ಧಾರವಾಗುತ್ತದೆ. ಮಂಡ್ಯ ವಿಚಾರದಲ್ಲೂ ಹಾಗೆಯೇ. ಸೂಕ್ತ ಚರ್ಚೆ ಮಾಡಿ ನಮ್ಮ ರಾಷ್ಟ್ರೀಯ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ" ಎಂದು ತಿಳಿಸಿದರು.
ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಕಾಂಗ್ರೆಸ್ ಸೇರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಜ. 31ರ ವರೆಗೆ ಎಲ್ಲೂ ಗುರುತಿಸಿಕೊಳ್ಳಲ್ಲ ಎಂದಿದ್ದಾರೆ. ಜನವರಿ 31ರ ನಂತರ ನೋಡೋಣ. 31ರ ನಂತರ ನನ್ನನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಅಲ್ಲದೆ, ತಾವು ಬಿಜೆಪಿಯಲ್ಲಿ ಉಳಿಯುವ ಮಾತನ್ನ ಅವರು ಹೇಳಿದ್ದಾರೆ'' ಎಂದು ಹೇಳಿದರು.
ಇದನ್ನೂ ಓದಿ: ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್