ಧಾರವಾಡ: ಶಿಗ್ಗಾಂವಿ ಕ್ಷೇತ್ರದಲ್ಲಿ ಗೆಲುವಿನ ಭರವಸೆ ಇತ್ತು. ಆದರೆ ಅಲ್ಲಿ ಏನು ತಪ್ಪಾಗಿದೆ ಅಂತಾ ನೋಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರದಲ್ಲಿ ನಮ್ಮ ಪಕ್ಷ ಸ್ಪರ್ಧಿಸಿತ್ತು. ಒಂದು ಕ್ಷೇತ್ರದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧಿಸಿದ್ದರು. ಆದರೆ ಸೋತಿದ್ದಾರೆ. ಅಲ್ಲಿ ಏನಾಗಿದೆ ಅಂತಾ ಪರಿಶೀಲನೆ ಮಾಡುತ್ತೇವೆ ಎಂದರು.
ಉಪಚುನಾವಣೆಯಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷದ ಪರ ಜನ ಇರ್ತಾರೆ. ಆಡಳಿತ ಪಕ್ಷದಿಂದ ಅನುದಾನಕ್ಕೆ ಅನುಕೂಲ ಎಂಬುದು ಸಾಮಾನ್ಯ. ಇನ್ನು ಶಿಗ್ಗಾಂವಿಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹಣ ಹಂಚಿಕೆಯಾಗಿದೆ. ಎರಡ್ಮೂರು ಗ್ರಾಪಂ ಗಳಿಗೆ ಒಬ್ಬೊಬ್ಬ ಮಂತ್ರಿ ಹಾಕಿದ್ದರು. ಜನ ತೀರ್ಮಾನ ಮಾಡಿದರೆ ಗೆಲ್ಲಬಹುದಿತ್ತು. ಇತ್ತೀಚಿನ ಎಲ್ಲ ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಆದರೆ ಈಗ ಸೋತಿದ್ದೇವೆ ಎಂದು ಹೇಳಿದರು.
ಇವಿಎಂ ದೋಷ ಎಂದು ನಾವು ಹೇಳುವುದಿಲ್ಲ. ಆದರೆ, ಇಡೀ ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಕಾಂಗ್ರೆಸ್ ಸಂಪೂರ್ಣವಾಗಿ ನೆಲ ಕಚ್ಚುತ್ತಿದೆ. ಮಹಾರಾಷ್ಟ್ರದಲ್ಲಿ ವಿಪಕ್ಷ ಆಗಲು ಅರ್ಹತೆ ಇಲ್ಲದ ಸ್ಥಿತಿಗೆ ಬಂದಿದ್ದಾರೆ. ಕಾಂಗ್ರೆಸ್ ಪರಾವಲಂಬಿ ಜೀವಿ ಪಾರ್ಟಿ ಆಗಿದೆ. ಕಾಂಗ್ರೆಸ್ ನವರು ಯಾರನ್ನೂ ಹಿಡಿದುಕೊಳ್ಳುತ್ತಾರೋ ಅವರನ್ನು ಮುಳುಗಿಸುತ್ತಾರೆ. ಎಸ್ಪಿ ಮುಳುಗಿಸಿದ್ರು, ನಂತರ ಶರದ್ ಪವಾರ್, ಉದ್ಧವ್ ಠಾಕ್ರೆ ಅವರನ್ನು ಮುಳುಗಿಸಿದ್ರು ಎಂದು ಟೀಕಿಸಿದರು.
ಮತ್ತೊಮ್ಮೆ ರಾಹುಲ್ ಗಾಂಧಿ ಲಾಂಚಿಂಗ್ ಫೇಲ್ ಆಗಿದೆ. 21ನೇ ಸಲ ರಾಹುಲ್ ಗಾಂಧಿ ಲಾಂಚ್ ಆಗಿದ್ದರು. ಹೊಸ ಹೊಸ ಇಂಜಿನ್ ಹಾಕಿ ಹಾರಿಸಿದ್ದರು. ಆದರೆ, ಆ ವಿಮಾನ ಕೆಳಗೆ ಬೀಳುತ್ತಿದೆ. ಮತ್ತೊಮ್ಮೆ ರಾಹುಲ್ ಗಾಂಧಿ ವಿಫಲ ನಾಯಕ ಆಗಿ ಹೊರಹೊಮ್ಮಿದ್ದಾರೆ ಎಂದರು.
ವಕ್ಫ್ ವಿರುದ್ಧ ಹೋರಾಟ ಮಾಡಿದರೂ ಬಿಜೆಪಿಗೆ ಸೋಲಾಗಿರುವ ಬಗ್ಗೆ ಮಾತನಾಡಿ, ಹಾಗಾದರೆ ಕಾಂಗ್ರೆಸ್ ಈಗ ವಕ್ಫ್ ಮುಂದುವರಿಸ್ತಾರಂತಾ. ಏನೇ ಆದರೂ ವಕ್ಪ್ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವಾಗಿಲ್ಲ: ಮತ್ತೊಂದೆಡೆ, ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಮಾತನಾಡಿ, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರು ಎರಡು ಸಲ ಸೋತಿದ್ದರು, ಹೀಗಾಗಿ ಅವರ ಮೇಲೆ ಜನರಿಗೆ ಈ ಬಾರಿ ಸಹಾನುಭೂತಿ ಇತ್ತು. ಚನ್ನಪಟ್ಟಣದಲ್ಲಿನ ಗೆಲುವು ಕಾಂಗ್ರೆಸ್ ಗೆಲುವಲ್ಲ, ಯೋಗೇಶ್ವರ್ ನಮ್ಮ ಪಕ್ಷದವರು. ನಮ್ಮ ಪಕ್ಷದವರನ್ನು ಕರೆದುಕೊಂಡು ಹೋಗಿ ಗೆದ್ದಿದ್ದಾರೆ ಎಂದರು.
ಸಂಡೂರನಲ್ಲಿ ಬಿಜೆಪಿ ಗೆಲ್ಲಬೇಕಿತ್ತು. ಅಲ್ಲಿ ಒಂದೊಂದು ವೋಟ್‌ಗೆ 2,500 ರೂ. ಕೊಟ್ಟಿದ್ದಾರೆ. ಆದರೂ ಕಾಂಗ್ರೆಸ್ ಲೀಡ್ ಕಡಿಮೆ ಆಗಿದೆ. ವಾಲ್ಮೀಕಿ ಹಗರಣದಲ್ಲಿ ಹಣ ಹೊಡೆದಿದ್ದು ರಿಫ್ಲೆಕ್ಟ್ ಆಗಿದೆ. ಸೋತರು ಅಲ್ಲಿ ಹೆಚ್ಚು ಮತ ಬಂದಿವೆ. ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಗೆಲ್ಲುತ್ತಾರೆಂಬ ವಿಶ್ವಾಸ ಇತ್ತು. ಪಕ್ಷ ಹೇಳಿದ್ದರಿಂದ ಭರತ್ ಬೊಮ್ಮಾಯಿ ಕೊನೆಯ ಗಳಿಗೆಯಲ್ಲಿ ಅಭ್ಯರ್ಥಿಯಾಗಿದ್ದರು. ಅಲ್ಲಿ 60 ಜನ ಅಕಾಂಕ್ಷಿಗಳು ತಯಾರಾಗಿದ್ದರು. ಅದರ ಅಸಮಾಧಾನ ಎಫೆಕ್ಟ್ ಆಗಿರಬಹುದು. ದೊಡ್ಡ ಪ್ರಮಾಣದ ದುಡ್ಡಿನ ಹಾವಳಿ ಉಪಚುನಾವಣೆ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದರು.
ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಹಿಂದೂ - ಮುಸ್ಲಿಂ ಭಾವನೆ ದೂರ ಮಾಡಿದ್ದೇವೆ: ಸಚಿವ ಸತೀಶ ಜಾರಕಿಹೊಳಿ