ಬೆಂಗಳೂರು: ನನ್ನನ್ನು ಬಂಧಿಸುವುದಕ್ಕೆ ನೂರು ಸಿದ್ದರಾಮಯ್ಯ ಬರಬೇಕು ಎಂದಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅಗತ್ಯ ಬಿದ್ದರೆ ಬಂಧಿಸುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಭಯ ಶುರುವಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿ, ನನಗೆ ಭಯ ಶುರುವಾಗಿದೆಯಾ?. ನನ್ನ ನೋಡಿದರೆ ಹಾಗೆ ಅನಿಸುತ್ತಾ?. ಅವರು ಕಳೆದ ವಾರದಿಂದ ಹೇಗೆ ನಡೆದುಕೊಡಿದ್ದಾರೆ ನೋಡಿದ್ದೀರಲ್ಲ. ಜನ ನೋಡಿದ್ದಾರೆ. ಮೈಸೂರಿನ ದಾಖಲೆ ಇದೆಯಲ್ಲ. ಮುಡಾ ಆಸ್ತಿಯನ್ನು ನನ್ನ ಆಸ್ತಿ ಅಂತ ಹೇಳ್ತಿದ್ದಾರೆ. ಇಂತಹ ಭಂಡತನದಿಂದ ಯಾವ ಸಿಎಂ ಕೂಡ ನಡೆದುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿನ ದಾಖಲೆ ತಿದ್ದುಪಡಿ ಕುರಿತು ಪ್ರತಿಕ್ರಿಯಿಸಿ, ಹೆಲಿಕಾಪ್ಟರ್ನಲ್ಲಿ ತೆಗೆದುಕೊಂಡು ಹೋದ್ರಲ್ವಾ?. ಈಗ ರೋಡ್ ಚೆನ್ನಾಗಿದೆ, ಒಂದೂವರೆ ಗಂಟೆಯಲ್ಲಿ ರೀಚ್ ಆಗಬಹುದು. ಒಳ್ಳೆಯ ಪೈಲೆಟ್ ಕರೆದುಕೊಂಡು ಹೋಗಿದ್ದಾರೆ. ಯಾವ ಪೇಪರ್‌ಗೆ ವೈಟ್ನರ್ ಹಾಕಿದ್ದಾರೆ. ಮೊದಲೇ ದಿನದಿಂದ ಎಷ್ಟು ಸುಳ್ಳು ಹೇಳಿಕೊಂಡು ಬಂದ್ರು. ಮೃತಪಟ್ಟಿರುವ ವ್ಯಕ್ತಿಯ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಡಿನೋಟಿಫಿಕೇಷನ್ ಮಾಡೋದಾದ್ರೆ ಅವನ ಮಗನ ಹೆಸರಲ್ಲಿ ಮಾಡಬಹುದಿತ್ತು. ಮುಡಾ ಹೆಸರಲ್ಲೇ ಪ್ರಾಪರ್ಟಿ ಇದೆ. ನಿಮ್ಮ ಬಾಮೈದ ಅಷ್ಟು ದಡ್ಡನಾ ಸಿದ್ದರಾಮಯ್ಯನವರೇ?. ಚೇಂಜ್ ಆಫ್ ಲ್ಯಾಂಡ್ ಯೂಸ್ ಯಾವ ಆಧಾರದ ಮೇಲೆ ಮಾಡಿದರು. 2010ರಲ್ಲಿ ದಾನ ಮಾಡಿದ್ನಲ್ಲ. ಆಗಲೇ ಅದು ಯಾವ ಆಸ್ತಿ ಅಂತ ಗೊತ್ತಾಗಲಿಲ್ವಾ ಎಂದು ಪ್ರಶ್ನಿಸಿದರು.
ಮುಡಾಗೆ ಅರ್ಜಿ ಹಾಕಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಪತ್ನಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬರೀ ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ: ಪರಮೇಶ್ವರ್ - CM Change Issue