ಉಡುಪಿ: 15 ವರ್ಷಗಳಿಂದ ಅನಾಥೆಯಾಗಿ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದುಕೊಂಡಿದ್ದ ಖುಷ್ಬು ಸುಮೇರಾ (21) ಅವರಿಗೆ ಶುಕ್ರವಾರ ಕಂಕಣ ಭಾಗ್ಯ ಒಲಿದುಬಂದಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯದ ಸಹಯೋಗದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಗಣ್ಯರು ಹಾಗೂ ಮಹಿಳಾ ನಿಲಯದ ಸಹ ನಿವಾಸಿನಿಯರ ಸಮ್ಮುಖದಲ್ಲಿ ಖುಷ್ಬು ಸುಮೇರಾ ಅವರು ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ರಾಜಸ್ತಾನದ ಜೋದ್‌ಪುರದವರೆನ್ನಲಾದ ಖುಷ್ಬು ಸುಮೇರಾ ಅನಾಥೆಯಾಗಿ ಆರು ವರ್ಷವಿರುವಾಗ ಬಾಲಮಂದಿರ ಸೇರಿದ್ದು, ಕಳೆದ ಮೂರು ವರ್ಷಗಳಿಂದ ಮಹಿಳಾ ನಿಲಯದಲ್ಲಿ ವಾಸವಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಅಂಬುತೀರ್ಥದ ದಿನೇಶ್ ಎ.ಪಿ. ಅವರ ಪುತ್ರ ಕೃಷಿಕ ಹಾಗೂ ಕೇಟರಿಂಗ್ ಉದ್ಯಮ ನಡೆಸುವ ಮಧುರಾಜ್ ಎ.ಡಿ. (29) ಅವರು ಸಂಪ್ರದಾಯ ರೀತಿಯಲ್ಲಿ ಖುಷ್ಭು ಸುಮೇರಾ ಅವರನ್ನು ವಿವಾಹವಾದರು.
ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಕಾರ್ಯಕ್ರಮ: ಉಡುಪಿ ಸಮೀಪದ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಶುಭಮುಹೂರ್ತದಲ್ಲಿ ಮುಂದೆ ನಿಂತು ಶಾಸ್ತ್ರೋಕ್ತವಾಗಿ ಕನ್ಯಾದಾನ ಮಾಡಿದರು.
"ಕಳೆದ ಜನವರಿ-ಫೆಬ್ರವರಿ ತಿಂಗಳಿನಿಂದ ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಾಹ ಸಂಬಂಧಿ ಮಾತುಕತೆಗಳು ಆರಂಭಗೊಂಡಿದ್ದವು. ಈ ವೇಳೆ ವಧು-ವರರ ಪರಸ್ಪರ ಸಮ್ಮತಿ, ಇಬ್ಬರ ಆರೋಗ್ಯ ಪರೀಕ್ಷೆ, ವರನ ಕುಟುಂಬದ ಹಿನ್ನೆಲೆ, ಆದಾಯದ ಪರಿಶೀಲನೆಗಳನ್ನು ನಡೆಸಲಾಗಿತ್ತು. ಎಲ್ಲಾ ವಿವರಗಳನ್ನು ಕಲೆ ಹಾಕಿದ ಬಳಿಕವೇ ಜಿಲ್ಲಾಡಳಿತ ಈ ವಿವಾಹಕ್ಕೆ ಒಪ್ಪಿಗೆ ಸೂಚಿಸಿದೆ" ಎಂದು ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ ತಿಳಿಸಿದರು.
"ಸರಕಾರದಿಂದ ಸ್ಟೇಟ್‌ಹೋಮ್ ನಿವಾಸಿನಿಯರ ವಿವಾಹ ಸಂದರ್ಭದಲ್ಲಿ 20,000 ರೂ.ಗಳನ್ನು ಜೀವನ ನಿರ್ವಹಣೆಗೆ ನೀಡಲಾಗುತ್ತದೆ. ಇದರಲ್ಲಿ 5000 ರೂ. ಮದುವೆ ಖರ್ಚಿಗೆ ಹಾಗೂ ಉಳಿದ 15,000 ರೂ.ಗಳನ್ನು ಆಕೆಯ ಹೆಸರಿನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡಲಾಗುತ್ತದೆ. ಮೂರು ವರ್ಷಗಳ ಬಳಿಕ ಅದನ್ನು ಆಕೆ ಬಳಸಿಕೊಳ್ಳಬಹುದು. ಮುಂದಿನ ಮೂರು ವರ್ಷಗಳ ಕಾಲ ಇವರು ಇಲಾಖೆಯ ನಿಗಾದಲ್ಲಿರುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಆಕೆಯ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಲಾಗುತ್ತದೆ. ಖುಷ್ಬು ಸುಮೇರಾ ಅವರು ಕಾರವಾರ ಬಾಲಮಂದಿರದಿಂದ ಇಲ್ಲಿಗೆ ಬಂದು ಇಲ್ಲೇ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಕಳೆದ ಆರು ತಿಂಗಳಿನಿಂದ ಮಕ್ಕಳ ರಕ್ಷಣಾ ಪಡೆಯಲ್ಲಿ ಉದ್ಯೋಗಿಯಾಗಿದ್ದಾರೆ" ಎಂದು ತಿಳಿಸಿದರು.
ಎಎಸ್ಪಿ ಟಿ.ಸಿದ್ಧಲಿಂಗಪ್ಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುರುಷೋತ್ತಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಅಧಿಕಾರಿ ವೀಣಾ ವಿವೇಕಾನಂದ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನೆ, ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ, ವಿವಿಧ ಮಹಿಳಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಸೇರಿದಂತೆ ನೂರಾರು ಮಂದಿ ನವ ಜೋಡಿಯನ್ನು ಆಶೀರ್ವದಿಸಿದರು.
3 ವರ್ಷದವರೆಗೆ ಇಲಾಖೆ ನಿಗಾ ವಹಿಸಲಿದೆ: "ತೀರ್ಥಹಳ್ಳಿ ಅಂಬುತೀರ್ಥದ ಮಧುರಾಜ್ ಎ.ಡಿ. ಪದವೀಧರರಾಗಿದ್ದು ತಂದೆಯೊಂದಿಗೆ ಕೇಟರಿಂಗ್ ಉದ್ಯಮ ನಡೆಸುತಿದ್ದಾರೆ. ಸಾಕಷ್ಟು ಕೃಷಿಯನ್ನೂ ಹೊಂದಿರುವ ಇವರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಅವರ ಹಿನ್ನೆಲೆಯನ್ನು ಪರಿಶೀಲಿಸಿ ಮದುವೆಗೆ ಒಪ್ಪಿಗೆ ಸೂಚಿಸಲಾಗಿದೆ" ಎಂದು ಜಿಲ್ಲಾಧಿಕಾರಿ ತಿಳಿಸಿದರು.
"ರಾಜ್ಯ ಮಹಿಳಾ ನಿಲಯದಲ್ಲಿ ವಾಸವಾಗಿರುವ ಹೆಣ್ಣು ಮಕ್ಕಳನ್ನು ವಿವಾಹವಾಗಲು ಸಾಕಷ್ಟು ಪ್ರಸ್ತಾಪಗಳು ಬರುತ್ತಿವೆ. ಆದರೆ ನಾವು ವಯಸ್ಸು, ಆರ್ಥಿಕ ಸ್ಥಿತಿಗತಿ ಸೇರಿದಂತೆ ಸಾಕಷ್ಟು ಅಂಶಗಳನ್ನು ಪರಿಶೀಲಿಸಿ ಮುಂದುವರಿಯುತ್ತೇವೆ. ಹುಡುಗ ಹಾಗೂ ಹುಡುಗಿಯ ಪರಸ್ಪರ ಒಪ್ಪಿಗೆಯೂ ಬೇಕಾಗುತ್ತದೆ. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಮದುವೆಯನ್ನು ಶಾಸ್ತ್ರೋಕ್ತವವಾಗಿ ನೆರವೇರಿಸಿದ್ದೇವೆ. ಈ ವಿವಾಹ ಕಾರ್ಯಕ್ಕೆ ಸರಕಾರದಿಂದ ನೀಡಲಾದ ಅನುದಾನದಲ್ಲಿ 15 ಸಾವಿರ ರೂ.ವನ್ನು ಸುಮೇರಾ ಹೆಸರಿನಲ್ಲಿ ಠೇವಣಿ ಇಡಲಾಗುವುದು. ಇಂದಿನ ಮದುವೆ ಕಾರ್ಯಕ್ಕೆ ಸಾಕಷ್ಟು ದಾನಿಗಳು ನೆರವು ನೀಡಿದ್ದಾರೆ" ಎಂದು ಹೇಳಿದರು.
"ಉಡುಪಿಯ ರಾಜ್ಯ ಮಹಿಳಾ ನಿಲಯವು 1976ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದು ಇಲ್ಲಿ ನಡೆದ 25ನೇ ವಿವಾಹ ಸಮಾರಂಭವಾಗಿದೆ. ಪ್ರಸ್ತುತ ಇಲ್ಲಿ 66 ಮಂದಿ ಮಹಿಳೆಯರು ಹಾಗೂ ಮೂವರು ಮಕ್ಕಳು ಇದ್ದಾರೆ. ಇವರಲ್ಲಿ 35ಕ್ಕೂ ಅಧಿಕ ಮಂದಿ ಹೊರ ರಾಜ್ಯದವರು. 45 ವರ್ಷ ಪ್ರಾಯ ಮೀರಿದವರು ಹೆಚ್ಚಿದ್ದಾರೆ. ಕೆಲವು ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣ ಪಡೆಯುತಿದ್ದಾರೆ" ಎಂದು ಪುಷ್ಪಾರಾಣಿ ಮಾಹಿತಿ ನೀಡಿದರು.
ಇದನ್ನೂ ಓದಿ: ಪ್ರಶ್ನೆ ಪತ್ರಿಕೆಯೋ, ಮದುವೆಯ ಕರೆಯೋಲೆಯೋ; ಈ ಶಿಕ್ಷಕಿಯ ವಿವಾಹಕ್ಕೆ ಹೋಗೋರಿಗೊಂದು ಪರೀಕ್ಷೆ! - TEACHER WEDDING INVITATION