ಹುಬ್ಬಳ್ಳಿ: ಕುಳಿತಲ್ಲಿಯೇ ಕೈತುಂಬಾ ಹಣ ಗಳಿಸಬಹುದು ಎಂದು ನಂಬಿಸಿದ ಸೈಬರ್ ವಂಚಕರು ನಗರದ ಅಕ್ಷಯ ಕಾಲೊನಿ ನಿವಾಸಿಯೊಬ್ಬರಿಗೆ 16.87 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಸುಧೀರ್ ಇಜಾರಿ ಹಣ ಕಳೆದುಕೊಂಡವರು.
ವಂಚನೆ ನಡೆಯುವುದು ಹೀಗೆ: ಸುಧೀರ್ ಅವರನ್ನು ಆನ್‌ಲೈನ್ ಮೂಲಕ ಪರಿಚಯಿಸಿಕೊಂಡ ವಂಚಕರು, ವಾಟ್ಸ್ಆ್ಯಪ್ ಗ್ರೂಪ್‌ಗೆ ಸೇರಿಸಿಕೊಂಡು ಪ್ರೇಕ್ಷಣೀಯ ಸ್ಥಳ, ಹೋಟೆಲ್ ಹಾಗೂ ಕಾಲೇಜುಗಳಿಗೆ ರೇಟಿಂಗ್ ಹಾಗೂ ರಿವ್ಯೂ ನೀಡುತ್ತಾ ಕುಳಿತಲ್ಲೇ ಹಣ ಗಳಿಸಬಹುದು ಎಂದು ನಂಬಿಸಿದ್ದಾರೆ. ನಂಬಿಕೆ ಬರಲಿ ಎಂಬ ಕಾರಣಕ್ಕೆ ಆರಂಭದಲ್ಲಿ 1,550 ರೂ. ಲಾಭ ನೀಡಿದ್ದಾರೆ. ಬಳಿಕ ಕಂಪನಿಯ ಖಾಯಂ ನೌಕರನಾಗಬೇಕಾದರೆ ಹೆಚ್ಚಿನ ಟಾಸ್ಕ್ ಮುಗಿಸಬೇಕು. ಇದಕ್ಕಾಗಿ ನಮ್ಮಲ್ಲಿ ಹಣ ಹೂಡಿಕೆ ಮಾಡಬೇಕು ಎಂದು ಹೇಳಿ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ.
ಪ್ರಕರಣ- 2: ಇದೇ ರೀತಿ ನಂಬಿಸಿ ಹುಬ್ಬಳ್ಳಿಯ ಆನಂದನಗರ ನಿವಾಸಿ ವಿಜಯಕುಮಾರ ಮಲ್ಲಸಮುದ್ರ ಎಂಬವರಿಗೆ ಸೈಬರ್ ವಂಚಕರು 7.74 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ. ಆನ್‌ಲೈನ್ ಮೂಲಕ ವಿಜಯಕುಮಾರ ಅವರನ್ನು ಪರಿಚಯಿಸಿಕೊಂಡು, ಮೊಬೈಲ್ ನಂಬರ್ಅನ್ನು ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿದ್ದಾರೆ. ಹೆಚ್ಚಿನ ಹಣ ಗಳಿಕೆಯ ಆಮಿಷ ತೋರಿಸಿ, ಆರಂಭದಲ್ಲಿ ಸ್ಪಲ್ಪ ಲಾಭಾಂಶ ನೀಡಿದ್ದಾರೆ. ನಂತರ ಹಂತಹಂತವಾಗಿ ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರು ನೀಡಲಾಗಿದೆ.
ಈ ಎರಡು ಘಟನೆಗಳ ಬಗ್ಗೆ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ದಾವಣಗೆರೆ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ, ಉಪನ್ಯಾಸಕನಿಗೆ ₹20 ಲಕ್ಷ ವಂಚಿಸಿದ ಸೈಬರ್ ಖದೀಮರು - cyber Fraud