ಕಲಬುರಗಿ: ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಕ್ಲರ್ಕ್ ಸೇರಿದಂತೆ ಇಬ್ಬರು ದುರ್ಮರಣ ಹೊಂದಿದ್ದು, ಓರ್ವ ಗಾಯಗೊಂಡಿರುವ ಘಟನೆ ವಿಜಯಪುರ-ಕಲಬುರಗಿ ರಸ್ತೆಯ ನೆಲೋಗಿ ಕಮಾನ ಹತ್ತಿರ ನಡೆದಿದೆ.
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಫಸ್ಟ್ ಗ್ರೇಡ್ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಾಂತಯ್ಯ ಸ್ವಾಮಿ (34) ಮತ್ತು ಖಾಸಗಿ ಕಂಪ್ಯೂಟರ್ ಆಪರೇಟರ್ ಲೋಕೇಶ ಹಾಸನ್ (35) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ತಡರಾತ್ರಿ ಘಟನೆ ನಡೆದಿದೆ. ಎಎಸ್‌ಪಿ ಬಿಂದುರಾಣಿ, ಸಿಪಿಐ ರಾಜಾಸಾಬ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಅಪಘಾತ - ಅಪ್ರಾಪ್ತನಿಗೆ ವಾಹನ ಚಲಾಯಿಸಲು ನೀಡಿದ ಆರೋಪಿಗೆ 25 ಸಾವಿರ ರೂ.ದಂಡ: ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದರಿಂದ ಉಂಟಾದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಗಾಯಗೊಂಡ ಪ್ರಕರಣದಲ್ಲಿ ಆರೋಪಿಗೆ ಇಲ್ಲಿನ 1ನೇ ಜೆಎಂಎಫ್‍ಸಿ ನ್ಯಾಯಾಲಯ 25 ಸಾವಿರ ರೂ.ದಂಡ ವಿಧಿಸಿದೆ. ನಗರದ ಲಾಹೋಟಿ ಪೆಟ್ರೋಲ್ ಪಂಪ್ ಕಡೆಯಿಂದ ಪಿಡಿಎ ಕಾಲೇಜು ಹೋಗುವ ರಸ್ತೆಯಲ್ಲಿರುವ ವಿ-ಕೇರ್ ಮಕ್ಕಳ ಆಸ್ಪತ್ರೆಯ ಎದರುಗಡೆಯ ರಸ್ತೆಯಲ್ಲಿ ಎರಡು ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರೊಬ್ಬರು ಗಾಯಗೊಂಡಿದ್ದರು.
ಇದನ್ನೂ ಓದಿ: ಅಲಕನಂದಾ ನದಿಗೆ ಉರುಳಿ ಬಿದ್ದ ಟೆಂಪೋ ಟ್ರಾವೆಲರ್: 10ಕ್ಕೂ ಹೆಚ್ಚು ಜನರ ದಾರುಣ ಸಾವು - Road accident in Rudraprayag
ಅಪ್ರಾಪ್ತನಿಗೆ ವಾಹನ ಚಲಾಯಿಸಲು ನೀಡಿದ ಹಿನ್ನೆಲೆಯಲ್ಲಿ ಆರೋಪಿ ಅಬ್ದುಲ್ ನಫಿಯಾನ್ ವಿರುದ್ಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂಚಾರಿ ಪೊಲೀಸ್ ಠಾಣೆ-1ರ ಪಿಎಸ್‍ಐ ದಶರಥ ಮತ್ತು ಮುಖ್ಯಪೇದೆ ಸೈಯದ್ ರಿಜ್ವಾನ್ ಅವರು ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1ನೇ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ದೇಶಮುಖ ಶಿವಕುಮಾರ ಅವರು ಆರೋಪಿ ಅಬ್ದುಲ್ ನಫಿಯಾನ್‍ಗೆ 25 ಸಾವಿರ ರೂ.ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಿನಾಯಕ ಎಸ್.ಕೋಡ್ಲಾ ವಾದ ಮಂಡಿಸಿದ್ದರು.
ಇದನ್ನೂ ಓದಿ: ರೈಲು ಅಪಘಾತ: ಸಮಯ ಪ್ರಜ್ಞೆ ಮೆರೆದು ಹಲವು ಜನರ ಪ್ರಾಣ ಉಳಿಸಿದ ಚಹಾ ಮಾರುವ ವ್ಯಕ್ತಿ - Jharkhand Train Accident