ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯಲ್ಲಿ ಗುರುವಾರ ಸಂಜೆ ಸುರಿದ ಗುಡುಗುಸಹಿತ ಮಳೆಗೆ ಇಬ್ಬರು ರೈತರು ಮೃತಪಟ್ಟಿದ್ದಾರೆ. 6 ಮಂದಿಗೆ ಗಾಯವಾಗಿದೆ. 12 ಕುರಿಗಳು ಸಾವನ್ನಪ್ಪಿವೆ.
ರಾಯಭಾಗ ಪಟ್ಟಣದ ಹೊರವಲಯದ ಶೋಭಾ ಕೃಷ್ಣ ಕುಲಗೋಡೆ (45) ಎಂಬವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮಲ್ಲಪ್ಪ ಶಂಕರ್ ಮೇತ್ರಿ, ಭಾರತಿ ಕೆಂಪಣ್ಣ ಕಮತೆ, ಬಾಬುರಾವ್ ಅಶೋಕ ಚೌವ್ಹಾಣ್, ಪ್ರವೀಣ್ ಕಲ್ಲಪ್ಪ ಧರ್ಮಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ರಾಯಭಾಗ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೆ ಹೊತ್ತು ಗದ್ದೆಯಲ್ಲಿ ಕಬ್ಬು ನಾಟಿ ಮಾಡುವ ಸಂದರ್ಭದಲ್ಲಿ ಸಿಡಿಲು ಬಡಿದು ಘಟನೆ ಸಂಭವಿಸಿದೆ. ಸ್ಥಳಕ್ಕೆ ರಾಯಭಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲೂ ಸಿಡಿಲು ಬಡಿದು ಗುರು ಪುಂಡಲಿಕ (35) ಎಂಬ ರೈತ ಮೃತಪಟ್ಟರು. ಇಬ್ಬರು ಗಾಯಗೊಂಡಿದ್ದು, ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಅಪ್ಪಳಿಸಿ ಘಟನೆ ಸಂಭವಿಸಿದೆ.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸಿಡಿಲಿನ ಅಬ್ಬರಕ್ಕೆ 12 ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.