ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ರಾಜ್ಯಸಭಾ ತೆರವಾಗುವ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಮೂವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು.
ಮೊದಲಿಗೆ ಮೈತ್ರಿಕೂಟದ ಚುನಾವಣಾ ಅಭ್ಯರ್ಥಿಯಾಗಿ ಬಿಜೆಪಿಯ ನಾರಾಯಣಸಾ ಭಾಂಡಗೆ ಹಾಗೂ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಅವರು ನಾಮ ಪತ್ರ ಸಲ್ಲಿಸಿದರು. ಈ ವೇಳೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಜೊತೆಗಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣ ಭಾಂಡಗೆ, ಸಾಮಾನ್ಯ ಕಾರ್ಯಕರ್ತನಿಗೂ ಬಿಜೆಪಿ ಗುರುತಿಸಿರುವುದು ಖುಷಿಯಾಗಿದೆ. ನನಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುವೆ ಎಂದು ತಿಳಿಸಿದರು.
ನಂತರ ಬಿ.ವೈ ವಿಜಯೇಂದ್ರ ಮಾತನಾಡಿ, ನಾರಾಯಣಸಾ ಭಾಂಡಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರು ಗೆಲ್ಲುವ ವಿಶ್ವಾಸವಿದೆ. ರಾಜ್ಯಕ್ಕೆ ನ್ಯಾಯ ಕೊಡುವ ಕಾರ್ಯ ಆಗಲಿದೆ. ಕರ್ನಾಟಕದಲ್ಲಿ ಕೂಡ ಬಿಜೆಪಿ ಅಧಿಕಾರಕ್ಕೆ ಬಂದಾಗ ರೈತರಿಗೆ ಶಕ್ತಿ ನೀಡುವ ಕೆಲಸ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಕೃಷಿ ಕ್ಷೇತ್ರಕ್ಕೆ 7,500 ಸಾವಿರ ಕೋಟಿ ರೂ. ಇಡಲಾಗಿತ್ತು. ಕಾಂಗ್ರೆಸ್ ಬಂದು 4 ಸಾವಿರ ಕೋಟಿ ರೂ ಇಟ್ಟಿದೆ. ರೈತರಿಗೆ ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗುವುದನ್ನ ತಡೆಯಲು ಈ ರೀತಿ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದೆ ಕಾಂಗ್ರೆಸ್ ರಾಜಕೀಯ ಪಿತೂರಿ ಇರೋದು ಸ್ಪಷ್ಟವಾಗಿದೆ. ರೈತರಿಗೆ ಶಕ್ತಿ ಕೊಡುವ ಕೆಲಸ ಬಿಜೆಪಿ ಮಾಡಿದೆ. ಅವರ ಅಕೌಂಟಿಗೆ ಹಣ ಹಾಕುವ ಕೆಲಸ ಮಾಡಿದೆ. ಅದರಲ್ಲಿ ಕಾಂಗ್ರೆಸ್ ಯಶಸ್ವಿ ಆಗಲು ಸಾಧ್ಯವಿಲ್ಲ ಎಂದರು
ಅಡ್ಡ ಮತದಾನ ಹೊಸದೇನಲ್ಲ : ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಬಿಜೆಪಿ ಜೊತೆ ಮೈತ್ರಿ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಆಗಿ ನಾರಾಯಣ ಭಾಂಡಗೆ ಇದ್ದಾರೆ. ಅವರ ಜೊತೆ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿಗೆ ಇರುವ ಹೆಚ್ಚುವರಿ ಮತವನ್ನು ಎನ್‌ಡಿಎ ಅಭ್ಯರ್ಥಿಗೆ ಹಾಕುವ ನಿರ್ಧಾರವನ್ನು ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಬಿಜೆಪಿ ಹಾಗೂ ಎನ್‌ಡಿಎ ಅಭ್ಯರ್ಥಿಗಳಿಗೆ ಆತ್ಮಸಾಕ್ಷಿಯ ಮತ ಮೂಲಕ ಗೆಲ್ಲುವ ವಿಶ್ವಾಸವಿದೆ. ಅಡ್ಡ ಮತದಾನದ ಆರೋಪ ಸಂಬಂಧ ಅಡ್ಡ ಮತದಾನ ಹೊಸದೇನಲ್ಲ. ಅದಕ್ಕೆ ಆರೋಪ ಮಾಡುವವರು ಈ ಹಿಂದೆ ಯಾವ ರೀತಿ ನಡೆದುಕೊಂಡಿದ್ದಾರೆ ನಮ್ಮ ಕಣ್ಣ ಮುಂದಿದೆ. ಆತ್ಮ ಸಾಕ್ಷಿ ಅನುಗುಣವಾಗಿ ಮತ ಹಾಕಿ ಅಂತ ಮನವಿ ಮಾಡುತ್ತೇನೆ. ಈ ಬಗ್ಗೆ ವಿರೋಧ ಮಾಡುವವರು ಮಾಡುತ್ತಾರೆ. ರಾಜಕೀಯ ಹೋರಾಟ ಮಾಡುವುದನ್ನು ಮಾಡುತ್ತೇವೆ ಮುಂದೆ ಏನಾಗಲಿದೆ ಕಾದು ನೋಡೋಣ ಎಂದರು.
ರೈತರನ್ನ ಟೂಲ್‌ಕಿಟ್ ಆಗಿ ಬಳಕೆ : ಆರ್.ಅಶೋಕ್ ಪ್ರತಿಕ್ರಿಯಿಸಿ, ನಾರಾಯಣಸಾ ಅವರು ಪಕ್ಷದ ಹಲವು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಸಕ್ರಿಯ ಕಾರ್ಯಕರ್ತನಿಗೆ ಉನ್ನತ ಜವಾಬ್ದಾರಿ ಸಿಕ್ಕಿದೆ. ಯಾರು ಮೈಕ್ರೋ ಜಾತಿಗಳಿವೆ ಆ ಜಾತಿಗಳನ್ನು ಗುರುತಿಸುವ ಕೆಲಸ ನಮ್ಮ ಹೈಕಮಾಂಡ್ ಮಾಡಿದೆ. ಜೆಡಿಎಸ್ ಕೂಡ ನಮ್ಮ ಎನ್‌ಡಿಎ ಜೊತೆ ಸೇರಿದ್ದು, ಇದರಿಂದ ಬಲ ಹೆಚ್ಚಾಗಿದೆ. ನಮ್ಮ ಎರಡೂ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ರೈತರ ಹೆಸರು ಹೇಳಿ ಹೋರಾಟ ನಡೆಯುತ್ತಿದೆ. ಇದು ಕಾಂಗ್ರೆಸ್ ಟೂಲ್ ಕಿಟ್ ಆಗಿದೆ. ಐ.ಎನ್.ಡಿ.ಐ ಒಕ್ಕೂಟವಿದ್ದು, ಎಲ್ಲ ಹೋಗಿ ಐ ಮಾತ್ರ ಉಳಿದುಕೊಳ್ಳಲಿದೆ. ಮಮತಾ, ಆಪ್, ಅಶೋಕ್ ಚೌಹಾಣ್ ಎಲ್ಲರೂ ಖಾಲಿ ಆಗಿದ್ದಾರೆ. ಟೂಲ್ ಕಿಟ್ ಆಗಿ ಈಗ ರೈತರ ಬಳಕೆ ಮಾಡಿಕೊಳ್ಳುದ್ದಾರೆ. ರೈತರು ಕಾಂಗ್ರೆಸ್ ಬೆಂಬಲ ಕೇಳಿಲ್ಲ. ಬೆಂಬಲ ಕೇಳುವ ಮೊದಲೇ ಇವರೇ ಬೆಂಬಲ ಕೊಡುತ್ತಿದ್ದಾರೆ. ರೈತರ ಅಕೌಂಟಿಗೆ ಹಣ ಹಾಕುವ ಕೆಲಸವನ್ನು ಕೇಂದ್ರ ಮಾಡಿದೆ. ಕೇಂದ್ರದ ವಿರುದ್ಧ ಕಾಂಗ್ರೆಸ್ ಟೂಲ್ ಕಿಟ್ ಆಗಿ ಮಾಡಿರೋದನ್ನು ವಿರೋಧಿಸುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ : ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಕರ್ನಾಟಕದಿಂದ ನಾರಾಯಣ ಭಾಂಡಗೆಗೆ ಟಿಕೆಟ್