ಮಂಗಳೂರು: ಮದುವೆ ಸಮಾರಂಭವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಂಪಲ ಕುಜುಮಗದ್ದೆ ನಿವಾಸಿ ರತ್ನಾಕರ್ ಮತ್ತು ಕಾಪಿಕಾಡು ನಿವಾಸಿ ಗಂಗಾಧರ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸ್ಥಾನವೊಂದರ ಕಲ್ಯಾಣ ಮಂಟಪದಲ್ಲಿ ಭಾನುವಾರ ಕುಟುಂಬಸ್ಥರ ಮದುವೆಗೆ ಎಂದು ಬಾಲಕಿ ಬಂದಿದ್ದಳು. ಆಕೆ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದಾಗ ಆರೋಪಿಗಳಿಬ್ಬರು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಸಂತ್ರಸ್ತೆ ಉಳ್ಳಾಲ ಠಾಣೆಯಲ್ಲಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಆರೋಪಿಗಳನ್ನು ಪೋಕ್ಸೊ ಕಾಯಿದೆಯಡಿ ಬಂಧಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತ್ರೆಗೆ ಬಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಗೆಳೆಯನ ಜೊತೆ ಜಾತ್ರೆಗೆ ಬಂದಿದ್ದ ಬಾಲಕಿಗೆ ಬ್ಲ್ಯಾಕ್‌ಮೇಲ್ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿದ್ದ ಘಟನೆ ಕೆಲದಿನಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ನಡೆದಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಸಿದ್ಧಗಂಗಾಮಠದ ಜಾತ್ರೆಗೆ ಬಂದಿದ್ದ ವಿದ್ಯಾರ್ಥಿನಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕುಳಿತಿದ್ದಾಗ ಆರೋಪಿಗಳು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿ ಬಿಡುವುದಾಗಿ ಬೆದರಿಸಿ, ಬೈಕ್‌ನಲ್ಲಿ ಬಾಲಕಿಯನ್ನು ರೂಮ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ದೌರ್ಜನ್ಯದ ಬಳಿಕ ಸಂತ್ರಸ್ತೆಯನ್ನು ಮತ್ತೆ ಮಠದ ಬಳಿ ತಂದು ಬಿಟ್ಟು ಪರಾರಿಯಾಗಿದ್ದರು. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಗ್ಯಾಂಗ್ರೇಪ್: ಆರೋಪಿಗಳಲ್ಲಿ ಇಬ್ಬರು ಅಪ್ತಾಪ್ತರು! - gang rape