ಬೆಂಗಳೂರು: ಉಂಗುರ ಖರೀದಿಗೆ ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನ ದೋಚಿ ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವೇಲೂರು ಜಿಲ್ಲೆಯ ಆಸ್ಗರ್ ಹಾಗೂ ಮುಬಾರಕ್ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಮಾರ್ಚ್ 4 ರಂದು ಹೊಸಕೆರೆಹಳ್ಳಿಯಲ್ಲಿರುವ ಕೃಷ್ಣ ಬ್ಯಾಂಕರ್ಸ್ ಮತ್ತು ಜ್ಯುವೆಲ್ಲರಿ ಶಾಫ್ಗೆ ಗ್ರಾಹಕರ ಸೋಗಿನಲ್ಲಿ ಇಬ್ಬರು ಖದೀಮರು ಬಂದಿದ್ದರು. ಉಂಗುರ ಖರೀದಿಸಬೇಕಿದ್ದು ವಿವಿಧ ಶೈಲಿಯ ಉಂಗುರ ತೋರಿಸುವಂತೆ ಅಂಗಡಿಯಲ್ಲಿದ್ದ ಓಂ ಪ್ರಕಾಶ್ ಅವರಿಗೆ ಕೇಳಿದ್ದಾರೆ. ತರಹೇವಾರಿ ರೀತಿಯ ಡಿಸೈನ್ ತೋರಿಸಿದರೂ ಒಪ್ಪದೇ ಇನ್ನಷ್ಟು ಬಗೆಬಗೆಯ ಚಿನ್ನದುಂಗುರ ತೋರಿಸುವಂತೆ ಹೇಳಿದ್ದರು.
ಇದೇ ವೇಳೆ ಅಂಗಡಿಗೆ ಬಂದ ಇಬ್ಬರು ಮಹಿಳಾ ಗ್ರಾಹಕರೊಂದಿಗೆ ಸಿಬ್ಬಂದಿ ಮಾತನಾಡುವಾಗ ಆತನ ಗಮನ ಬೇರೆಡೆ ಸೆಳೆದು ಸುಮಾರು 3.60 ಲಕ್ಷ ಬೆಲೆಯ 60 ಗ್ರಾಂ ಮೌಲ್ಯದ ಉಂಗುರ ಕಳ್ಳತನ ಮಾಡಿದ್ದರು. ಕೃತ್ಯವೆಸಗಿದ ಬಳಿಕ ಡಿಸೈನ್ ಇಷ್ಟವಿಲ್ಲವೆಂದು ತಿಳಿಸಿ ಅಂಗಡಿಯಿಂದ ನಿರ್ಗಮಿಸಿದ್ದರು. ಅಭರಣ ಅಂಗಡಿ ಮಾಲೀಕ ಓಂರಾಮ್ ಬಂದು ಬಾಕ್ಸ್ನಲ್ಲಿದ್ದ ಚಿನ್ನದುಂಗುರ ಇಲ್ಲದಿರುವುದನ್ನು ಕಂಡು ಓಂಪ್ರಕಾಶ್ಗೆ ಪ್ರಶ್ನಿಸಿದ್ದರು. ಸತತ ಹುಡುಕಾಟ ನಡೆಸಿದರೂ ಉಂಗುರ ಸಿಗದ ಪರಿಣಾಮ ಅನುಮಾನಗೊಂಡು ಓಂಪ್ರಕಾಶ್ ಅಂಗಡಿಗೆ ಬಂದಿದ್ದ ಇಬ್ಬರು ಗ್ರಾಹಕರ ಬಗ್ಗೆ ಸಂಶಯ ವ್ಯಕ್ತಪಡಿಸಿ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನವೆಸಗಿರುವುದು ಗೊತ್ತಾಗಿತ್ತು. ಈ ಸಂಬಂಧ ಅಂಗಡಿ ಮಾಲೀಕ ಓಂರಾಮ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳು ಬಂದಿದ್ದ ಬೈಕ್ ಸಂಖ್ಯೆ ಆಧಾರದ ಮೇರೆಗೆ ತಾಂತ್ರಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಲು ತಮಿಳುನಾಡಿನ ವೇಲೂರಿಗೆ ತೆರಳಿದಾಗ ಖದೀಮರು ಕಾರು ಹತ್ತಿ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದರು. ಅದಲ್ಲದೆ ಸ್ಥಳೀಯರು ಆರೋಪಿಗಳ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯ ಪೊಲೀಸರ ನೆರವಿನಿಂದ ಆರೋಪಿಗಳನ್ನು ಬಂಧಿಸಿದ ಗಿರಿನಗರ ಠಾಣೆ ಪೊಲೀಸರು, ಆರೋಪಿಗಳನ್ನು ಬೆಂಗಳೂರಿಗೆ ಕರೆತಂದಿದ್ದಾರೆ.
ವಿಚಾರಣೆ ವೇಳೆ, ಕದ್ದ ಚಿನ್ನವನ್ನು ಬೇರೆಡೆ ಮಾರಾಟ ಮಾಡಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದು, ಇನ್ನಷ್ಟೇ ಆಭರಣವನ್ನು ರಿಕವರಿ ಮಾಡಿಕೊಳ್ಳಬೇಕಿದೆ. ಆರೋಪಿಗಳು ನಗರದ ವಿವಿದೆಢೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಗುಮಾನಿ ಇದ್ದು, ಹೆಚ್ಚಿನ ವಿಚಾರಣೆಗೊಳಪಡಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನೀರಾವರಿ ಇಲಾಖೆಯ ಇಂಜಿನಿಯರ್ ಮಗನ ಮದುವೆಯಲ್ಲಿ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ