ತುಮಕೂರು: ಪಿಡಬ್ಲ್ಯೂಡಿ ಕಚೇರಿಯಲ್ಲಿ ಟೆಂಡರ್ ಕರಾರು ಮಾಡಿಕೊಡದ ಇಂಜಿನಿಯರ್ ಧೋರಣೆ ವಿರುದ್ಧ ಧರಣಿ ಕುಳಿತಿದ್ದ ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಮೇಲೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಬೆಂಬಲಿಗರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ರಾಯಸಂದ್ರ ರವಿಕುಮಾರ್, ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಬೆಂಬಲಿಗರೂ ಆಗಿದ್ದಾರೆ. 2018ರ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ''ನಿನ್ನೆ ತುಮಕೂರು ನಗರದ ಪಿಡಬ್ಲೂಡಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ 10.30ರ ಸುಮಾರಿಗೆ ಏಕಾಏಕಿ ಆವರಣದೊಳಗೆ ನುಗ್ಗಿದ ಶಾಸಕರು ಮತ್ತು ಅವರ ಸಹಚರರು ಹಲ್ಲೆ ಮಾಡಿದ್ದಾರೆ'' ಎಂದು ರಾಯಸಂದ್ರ ರವಿಕುಮಾರ್ ಆರೋಪಿಸಿದ್ದಾರೆ.
ಅವಾಚ್ಯ ಶಬ್ಧಗಳಿಂದ ನಿಂದಿಸಿ, ನನಗೆ ಥಳಿಸಲಾಗಿದೆ. ಜೊತೆಗೆ ಕಾರಿನಲ್ಲಿ ಕೂರಿಸಿಕೊಂಡು ಕಿಡ್ನಾಪ್ ಮಾಡುವುದಕ್ಕೆ ಯತ್ನಿಸಲಾಗಿದೆ. ಗಲಾಟೆ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಲಾಗಿದೆ. ಸ್ಥಳದಲ್ಲಿದ್ದ ಖುರ್ಚಿಗಳನ್ನೆಲ್ಲ ಪುಡಿ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ವೇಳೆ, ತಪ್ಪಿಸಿಕೊಂಡು ಓಡಿಹೋಗಿ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ.
ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದ ರಾಯಸಂದ್ರ ರವಿಕುಮಾರ್ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ ಸಿಐಡಿಗೆ ವರ್ಗಾವಣೆ