ತುಮಕೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಲ್ಪತರು ನಾಡು ತುಮಕೂರು ಕ್ಷೇತ್ರ ಈ ಬಾರಿ ಬಿಜೆಪಿಯ ವಿ.ಸೋಮಣ್ಣ ಹಾಗೂ ಕಾಂಗ್ರೆಸ್ನ ಮುದ್ದಹನುಮೇಗೌಡ ನಡುವೆ ನೇರ ಪೈಪೋಟಿ ಕಂಡಿದೆ. ಅದರಲ್ಲೂ, ಚುನಾವಣೆಯಲ್ಲಿ ಸ್ಥಳೀಯ ಮತ್ತು ವಲಸಿಗ ಅಸ್ತ್ರ ಪ್ರಯೋಗ ಆಗಿರುವುದು ವಿಶೇಷ. ಹೀಗಾಗಿ ಗೆಲ್ಲೋರ್‍ಯಾರು?, ಸೋಲೋರ್‍ಯಾರು? ಎಂಬ ಲೆಕ್ಕಾಚಾರ ಜೋರಾಗಿದೆ.
ತುಮಕೂರು ಲೋಕಸಭೆ ಕ್ಷೇತ್ರವು 1952 ರಿಂದ 2019ರವರೆಗೆ 17 ಚುನಾವಣೆಗಳನ್ನು ಕಂಡಿದೆ. ಈ ಬಾರಿ ಕಾಂಗ್ರೆಸ್ನ ಮಾಜಿ ಸಂಸದ ಮುದ್ದಹನುಮೇಗೌಡ ಗೆದ್ದು ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಹಂಬಲದಲ್ಲಿದ್ದಾರೆ. ಮತ್ತೊಂದೆಡೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿಯ ವಿ.ಸೋಮಣ್ಣ ರಾಜಕೀಯ ಜೀವನದ ಕಠಿಣ ಅದೃಷ್ಟ ಪರೀಕ್ಷೆ ಎದುರಿಸಿದ್ದಾರೆ. ಈ ಬಾರಿ ಶೇ.78.05ರಷ್ಟು ಮತದಾನವಾಗಿದೆ. 6,49,934 ಪುರುಷರು ಮತ್ತು 6,46,767 ಮಹಿಳೆಯರು ಹಾಗೂ 19 ಮಂದಿ ಇತರರು ಸೇರಿ ಒಟ್ಟಾರೆ 12,96720 ಮಂದಿ ಮತ ಚಲಾಯಿಸಿದ್ದಾರೆ.
ಸ್ಥಳೀಯ-ವಲಸಿಗ ಅಸ್ತ್ರ: 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಆಗಿನ ಕಾಂಗ್ರೆಸ್ನ ಹಾಲಿ ಸಂಸದ ಮುದ್ದಹನುಮೇಗೌಡ ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ಆದರೆ, ಮೈತ್ರಿ ಅಭ್ಯರ್ಥಿ ದೇವೇಗೌಡರಿಗೆ ಸೋಲಾಗಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಎಸ್.ಬಸವರಾಜ್ ಗೆದ್ದಿದ್ದರು. ಆದರೆ, ಈ ಬಾರಿ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಚಿತ್ರಣ ಮತ್ತು ಮೈತ್ರಿ ಪಕ್ಷಗಳು ಬದಲಾಗಿವೆ.
ಅಂದು ಕಾಂಗ್ರೆಸ್ ಜೊತೆಗಿದ್ದ ಜೆಡಿಎಸ್, ಈ ಬಾರಿ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿದೆ. ಜೊತೆಗೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುದ್ದಹನುಮೇಗೌಡ ಮತ್ತೆ ಕಾಂಗ್ರೆಸ್‌ನಿಂದ ಮರಳಿ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ, ಹಾಲಿ ಸಂಸದ ಬಸವರಾಜ್ ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಬಿಜೆಪಿ ವಿ.ಸೋಮಣ್ಣಗೆ ಮಣೆ ಹಾಕಿದೆ. ಇದೇ ಕಾರಣಕ್ಕೆ ಈ ಚುನಾವಣೆಯಲ್ಲಿ ಸ್ಥಳೀಯ ಹಾಗೂ ವಲಸಿಗ ಅಸ್ತ್ರ ಪ್ರಯೋಗಕ್ಕೆ ತುಮಕೂರು ಸಾಕ್ಷಿಯಾಗಿ ಚುನಾವಣಾ ಪ್ರಚಾರದ ದಿಕ್ಕೇ ಬದಲಾಗಿತ್ತು.
ತಾವು ವಲಸಿಗ ಎಂಬ ಚರ್ಚೆಗೆ ವಿ.ಸೋಮಣ್ಣ ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡಿ ಮತಯಾಚಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ, ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಪರಮೇಶ್ವರ್ ಕೂಡ ವಲಸಿಗರೇ ಎನ್ನುವ ಮೂಲಕ ಟಾಂಗ್ ನೀಡಿದ್ದರು. ಇದರ ಹೊರತಾಗಿ ಸುಭದ್ರ ರಾಷ್ಟ್ರ ನಿರ್ಮಾಣ, 10 ಸಾವಿರ ಕೋಟಿ ರೂ ಪ್ಯಾಕೇಜ್ ಅನುದಾನ ತರುವುದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹೀಗೆ ಅನೇಕ ಅಭಿವೃದ್ಧಿ ವಿಚಾರಗಳನ್ನು ಜನರ ಮುಂದಿಟ್ಟು ಪ್ರಚಾರ ನಡೆಸಿದ್ದರು.
ಇದಲ್ಲದೇ, ಸೋಮಣ್ಣ, ಕ್ಷೇತ್ರ ಸಂಚಾರ, ಕಾರ್ಯಕರ್ತರು, ಮುಖಂಡರ ಮನೆಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಂಡಿದ್ದರು. ಈ ಮುಖಾಂತರ ಕಾರ್ಯಕರ್ತರಲ್ಲೂ ಹೊಸ ಹುರುಪು ತುಂಬಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಮತ್ತು ಬಿಜೆಪಿ ಘಟಾನುಘಟಿ ನಾಯಕರೊಂದಿಗೆ ತಮ್ಮ ಅಪಾರ ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶಿಸಿದ್ದರು. ಈಗ ಚುನಾವಣಾ ಫಲಿತಾಂಶ ಪರ ಬರುವ ವಿಶ್ವಾಸದಲ್ಲಿದ್ದಾರೆ ಸೋಮಣ್ಣ.
ಮತ್ತೊಂದೆಡೆ, ಒಮ್ಮೆ ಸಂಸದರಾಗಿದ್ದ ಹಾಗೂ ಎರಡು ಬಾರಿ ಕುಣಿಗಲ್ ಶಾಸಕರಾಗಿದ್ದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು ಎಂಬ ಕಾರಣದಿಂದ ಹೆಚ್ಚು ರಿಸ್ಕ್ ತೆಗೆದುಕೊಂಡು ಮುದ್ದಹನುಮೇಗೌಡರನ್ನು ಮರಳಿ ತಂದು ಕಾಂಗ್ರೆಸ್ ಚುನಾವಣೆ ಎದುರಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಹಾಗೂ ತಾವು ಸಂಸದರಾಗಿದ್ದಾಗ ಮಾಡಿದ ಕಾರ್ಯಗಳ ತಮ್ಮ ಕೈ ಹಿಡಿಯಲಿವೆ ಎಂಬ ವಿಶ್ವಾಸದಲ್ಲಿ ಮುದ್ದಹನುಮೇಗೌಡ ಇದ್ದಾರೆ.
ಇದನ್ನೂ ಓದಿ: ಲೋಕಸಮರ: ಯಾರಿಂದ ಯಾರಿಗೆ ಹೊಡೆತ? ರಾಜ್ಯದ 28 ಕ್ಷೇತ್ರಗಳ ಮಾಹಿತಿ - Lok Sabha Election