ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಬಳಿ ಹೊಸದಾಗಿ ಎರಡು ಹೊಸ ಟ್ರ್ಯಾಕ್ಗಳನ್ನ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಾಮಗಾರಿ ಕೈಗೆತ್ತಿಕೊಂಡಿದ್ದು, ಕೆಆರ್ ಪುರ ಸಂಪರ್ಕಿಸುವ ಲೂಪ್ನಲ್ಲಿ ದ್ಚಿಚಕ್ರ ವಾಹನ ಹೊರತುಪಡಿಸಿ ಇನ್ನುಳಿದ ವಾಹನ ಸಂಚಾರ ನಿಷೇಧಿಸಲಾಗಿದೆ. ಏಪ್ರಿಲ್ 17ರಿಂದ ಮುಂದಿನ ಆರು ತಿಂಗಳುವರೆಗೂ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಸಂಚಾರ ಪೊಲೀಸರು ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ.
ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ವಾಹನಗಳ ಪೈಕಿ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ವಾಹನಗಳಿಗೆ ಕೆ.ಆರ್.ಪುರಂಗೆ ಹೋಗುವ ಲ್ಯಾಂಪ್ ಮುಚ್ಚಲಾಗುತ್ತಿದೆ. ನಾಗವಾರ ಕಡೆಯಿಂದ ನಗರದ ಒಳಗೆ ಮೇಕ್ರಿ ಸರ್ಕಲ್ ಮೂಲಕ ಬರುತ್ತಿದ್ದ ವಾಹನಗಳ ಚಾಲಕರು ಹೆಬ್ಬಾಳ ಸರ್ಕಲ್‌ನಲ್ಲಿ ಮೇಲ್ಸೇತುವೆ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೆಹಳ್ಳಿ ಜಂಕ್ಷನ್ ಬಳಿಯೂ ಟರ್ನ್ ಪಡೆದು ಸರ್ವಿಸ್ ರಸ್ತೆಯಿಂದ ಹೆಬ್ಬಾಳ ಫ್ಲೈಓವರ್‌ನ ರಾಂಪ್ ಮುಖಾಂತರ ನಗರದ ಕಡೆಗೆ ಚಲಿಸಬಹುದಾಗಿದೆ.
ಕೆ.ಆರ್.ಪುರ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳ ಚಾಲಕರು ಪರ್ಯಾಯ ಮಾರ್ಗಗಳಾದ ಐಒಸಿ-ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ, ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಲು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
ಹೆಗಡೆ ನಗರ - ಥಣಿಸಂದ್ರ ಕಡೆಯಿಂದ ಬರುವ ವಾಹನ ಚಾಲಕರು ಜಿಕೆವಿಕೆ ಜಕ್ಕೂರೂ ರಸ್ತೆ ಮೂಲಕ ನಗರ ಪ್ರವೇಶಿಸಿಸಬಹುದಾಗಿದೆ. ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈಓವರ್ ಕೆಳಗಡೆ ನೇರವಾಗಿ ಬಿ.ಇ.ಎಲ್ ಸರ್ಕಲ್ ತಲುಪಿ ಎಡ ತಿರುವು ಪಡೆದು ಸದಾಶಿವನಗರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಐ.ಐ.ಎಸ್.ಸಿ. ಮುಖಾಂತರ ಚಲಿಸಬಹುದಾಗಿದೆ.
ಕೆ.ಆರ್.ಪುರಂ, ಹೆಣ್ಣೂರು, ಹೆಚ್.ಆರ್.ಬಿ.ಆರ್.ಲೇಔಟ್, ಕೆ.ಜಿ.ಹಳ್ಳಿ, ಬಾಣಸವಾಡಿ ಕಡೆಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಹೋಗಬಯಸುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆ ಬಳಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮೇಲ್ಸೇತುವೆಯಿಂದ ಜಿಗಿದು ವ್ಯಕ್ತಿ ಸಾವು - Crime News