ಚಿಕ್ಕಮಗಳೂರು : ಕಳೆದ ಕೆಲ ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಗಿರಿ ಶಿಖರಗಳು ಹಚ್ಚ ಹಸಿರಿನಿಂದ ಕಂಗೊಳಿಸಲು ಪ್ರಾರಂಭಿಸಿವೆ. ವೀಕೆಂಡ್ ಹಿನ್ನೆಲೆ ಸಾಲು ಸಾಲು ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದವು. ಕೈಮರದಲ್ಲಿ ವಾಹನ ದಟ್ಟಣೆ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮಂಜು ಮುಸುಕಿದ ವಾತಾವರಣ, ಚುಮು ಚುಮು ಚಳಿ, ಮಂಜಿನ ಹನಿಗಳು, ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಪ್ರತಿನಿತ್ಯ ರಾಜ್ಯದ ಮೂಲೆ ಮೂಲೆಯಿಂದ ಇಲ್ಲಿನ ಪ್ರವಾಸಿ ತಾಣ ಹಾಗೂ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕಾಫಿನಾಡಿಗೆ ಆಗಮಿಸುತ್ತಾರೆ. ಅದರಲ್ಲೂ ವಾರದ ರಜೆ ಇರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಕಾಫಿ ನಾಡಿನತ್ತ ಪ್ರವಾಸಿಗರ ದಂಡು ಹರಿದುಬಂದಿದ್ದರು.
ಚಿಕ್ಕಮಗಳೂರು ಲಿಂಗದಹಳ್ಳಿ ತರೀಕೆರೆ ರಸ್ತೆಯಲ್ಲಿರುವ ಕೈಮರ ಬಳಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ನಿಂತಲ್ಲಿ ನಿಂತಿದ್ದು, ಈ ರಸ್ತೆಯ ಮೂಲಕವೇ ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ಕವಿಕಲ್ ಗಂಡಿ, ಹೊನ್ನಮ್ಮನ ಹಳ್ಳ, ದತ್ತಪೀಠ, ಗಾಳಿ ಕೆರೆ ಪ್ರದೇಶಗಳಿಗೆ ಹೋಗಬೇಕಾಯಿತು.
ಚಿಕ್ಕಮಗಳೂರು ಕೈಮರ, ಮುಳ್ಯಯ್ಯನಗಿರಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾದ ಕಾರಣ, ಟ್ರಾಫಿಕ್ ಜಾಮ್ನಲ್ಲಿ ವಾಹನ ಸವಾರರು ಸಿಲುಕಿ ಪರದಾಟ ನಡೆಸಿದರು. ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಪೊಲೀಸ್ ಹಾಗೂ ಚೆಕ್ ಪೋಸ್ಟ್ ಸಿಬ್ಬಂದಿ ಹರಸಾಹಸಪಟ್ಟರು.
ಇದನ್ನೂ ಓದಿ : ಚಿಕ್ಕಮಗಳೂರು: ನಿರಂತರ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್, ಪ್ರವಾಸಿಗರು ಹೈರಾಣ - RAIN IN CHIKMAGALURU