ಬೆಂಗಳೂರು : ಇಂದು ಭಾರತವನ್ನು ಇಡೀ ವಿಶ್ವ ಗೌರವಿಸುತ್ತಿದೆ. ಭಾರತದ ಪಾಸ್ಪೋರ್ಟ್ಗೆ ನೂರಾರು ದೇಶಗಳು ಉನ್ನತ ಸ್ಥಾನವನ್ನು ಕೊಟ್ಟು ವೀಸಾ ಫ್ರೀ ಮಾಡಿವೆ. ನಮ್ಮ ದೇಶ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಮತ್ತೆ ಪಸರಿಸುತ್ತಿದೆ. ಈಗ ಬೇರೆ ದೇಶಕ್ಕೆ ಮಾರ್ಗದರ್ಶನ ನೀಡುವ ಮಟ್ಟಕ್ಕೆ ಬೆಳೆದಿದೆ. ಇದಕ್ಕೆಲ್ಲ ಬಲಿಷ್ಠ ನಾಯಕತ್ವ ಮುಖ್ಯ ಕಾರಣವಾಗಿದೆ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ರಾಮ್ ಮಾಧವ್ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಹೆಚ್.ಎಸ್.ಆರ್ ಬಡಾವಣೆಯ ಆಕ್ಸ್ಫರ್ಡ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ದ ಇಂಡಿಯಾ ರಿಯಾಲಿಟಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಮೂಲತಃ ಆಂಧ್ರಪ್ರದೇಶದವನಾದ ನಾನು ಪ್ರಾದೇಶಿಕತೆಗಿಂತ ಭಾರತೀಯತೆ ಮುಖ್ಯ ಎಂದು ಚಿಕ್ಕಂದಿನಿಂದ ಬೆಳೆಸಿಕೊಂಡು ಬಂದೆ. ಅಲ್ಲಿಂದ ನನ್ನ ಅನುಭವ ಮತ್ತು ಈಗಿನ ಭಾರತದ ಬೆಳವಣಿಗೆಯನ್ನು ಈ ಪುಸ್ತಕದಲ್ಲಿ ನಮೂದಿಸಿದ್ದೇನೆ. ಕೋಟ್ಯಂತರ ಜನರಿಗೆ ನಿಜವಾದ ಭಾರತದ ಸ್ಥಿತಿಗತಿ ತಿಳಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ದೇಶದ ಬೆಳವಣಿಗೆಗೆ ತೊಡಕಾಗಿದ್ದ ಜಮ್ಮು ಕಾಶ್ಮೀರದಲ್ಲಿದ್ದ 370ನೇ ವಿಧಿಯನ್ನು ತೆಗೆದುಹಾಕುವ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರ ತುಂಬಾ ಉತ್ತಮ ರೀತಿಯಲ್ಲಿ ಮಾಡಿ ತೋರಿಸಿತು. ಇಂದು ಸಾಮಾಜಿಕ ಜಾಲತಾಣದ ಬೆಳವಣಿಗೆಯಿಂದ ಸತ್ಯ ಎಲ್ಲೆಡೆ ಸುಲಭವಾಗಿ ಗೊತ್ತಾಗುತ್ತಿದೆ. ಕೆಲವು ಪಾಶ್ಚಾತ್ಯ ಮಾಧ್ಯಮಗಳು ಇಂದಿಗೂ ಸುಳ್ಳನ್ನು ಬಿತ್ತರಿಸುತ್ತಿವೆ. ಆದ್ರೆ ಭಾರತದ ಜನರು ಇಂದು ಸತ್ಯವನ್ನು ಕಂಡುಕೊಳ್ಳುತ್ತಿದ್ದಾರೆ. ಅಂತರ್ಜಾಲ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಇದು ಸಾಧ್ಯವಾಗಿದೆ ಎಂದರು.
ಪ್ರತಿಪಕ್ಷದ ಹಲವು ನಾಯಕರು ಮತ್ತೆ ಅಧಿಕಾರಕ್ಕೆ ಬಂದರೆ 370 ನೇಯ ವಿಧಿಯನ್ನು ವಾಪಸ್ ತರುವುದಾಗಿ ಬೊಬ್ಬಿಡುತ್ತಿದ್ದಾರೆ. ಅವರ ಈ ಮಾತುಗಳು ಎಂದಿಗೂ ಸತ್ಯವಾಗಲು ಸಾಧ್ಯವಿಲ್ಲ. ಕಾಶ್ಮೀರದ ಮತ್ತು ಇಡೀ ಭಾರತದ ಜನರು ಈ ವಿಧಿಯನ್ನು ತೆಗೆದುಹಾಕಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಸ್ವಾಗತಿಸಿದ್ದರು. ಅದರ ಲಾಭಗಳನ್ನು ಈಗಾಗಲೇ ನೋಡುತ್ತಿದ್ದಾರೆ. ಆದ್ದರಿಂದ ಪಟ್ಟಭದ್ರ ಹಿತಾಸಕ್ತಿಗಳ ಪ್ರಯತ್ನ ಎಂದಿಗೂ ಕೈಗೂಡಲು ಸಾಧ್ಯವಿಲ್ಲ ಎಂದು ರಾಮ್ ಮಾಧವ್ ಹೇಳಿದರು.
ಎನ್.ಇ.ಪಿಯಲ್ಲಿ ಭಗವದ್ಗೀತೆಯನ್ನು ಮಕ್ಕಳಿಗೆ ಓದಿಸಲು ಅನುವು ಮಾಡಿಕೊಡಲಾಗಿದೆ. ಸರಿಯಾದ ಭಾರತೀಯ ಐತಿಹಾಸಿಕ, ಸಂಸ್ಕೃತಿಯನ್ನು ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಿ ಈಗಾಗಲೇ ಕಲಿಸಲಾಗುತ್ತಿದೆ. ಆದರೆ ಬಿಜೆಪಿಯೇತರ ಸರ್ಕಾರವಿರುವ ರಾಜ್ಯ ಸರ್ಕಾರಗಳು ಕೇಂದ್ರ ಶಿಕ್ಷಣ ನೀತಿಯನ್ನು ಸುಖಾ ಸುಮ್ಮನೆ ವಿರೋಧಿಸಿ ತಮ್ಮ ವಿಚಾರಧಾರೆಗಳನ್ನು, ಸುಳ್ಳುಗಳನ್ನು ಪಠ್ಯದಲ್ಲಿ ತುಂಬುವ ಕೆಲಸ ಮಾಡಿ, ಹೊಸ ಪೀಳಿಗೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ದೂರಿದರು.
ನಮ್ಮ ಸಾಮಾಜಿಕ ಪರಿಸ್ಥಿತಿ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಪಾಶ್ಚಿಮಾತ್ಯರ ಅನುಕರಣೆ ಈಗ ಮುಂಚಿನ ರೀತಿಯಲ್ಲಿ ಆಗುತ್ತಿಲ್ಲ. ಭಾರತ ಸಾವಿರ ವರ್ಷಗಳ ಹಿಂದೆ ವಿಶ್ವ ಗುರುವಾಗಿ, ಆರ್ಥಿಕ ಶಕ್ತಿಯಾಗಿ, ಉತ್ತಮ ಆಡಳಿತಕ್ಕೆ ಮಾದರಿಯಾಗಿತ್ತು. ಮೊಗಲರ ಮತ್ತು ಬ್ರಿಟಿಷ್ ಆಳ್ವಿಕೆಯಲ್ಲಿ ಪಾತಾಳಕ್ಕೆ ತಳ್ಳಲ್ಪಟ್ಟಿತು. ಆದರೆ ಈಗಿನ ಬಲಿಷ್ಠ ಆಡಳಿತದ ಅಡಿಯಲ್ಲಿ ಭಾರತ ಮತ್ತೆ ತನ್ನ ಶಕ್ತಿಯನ್ನು ಮೈಗೂಡಿಸಿಕೊಂಡು ಮುನ್ನುಗ್ಗುತ್ತಿದೆ. ಇದು ಜನರು ಉತ್ತಮ ಸರ್ಕಾರವನ್ನು ಕೇಂದ್ರದಲ್ಲಿ ತಂದಿದ್ದಕ್ಕೆ ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಸ್.ಎನ್.ಎಲ್.ವಿ ನರಸಿಂಹ ರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಆರ್‌ಎಸ್‌ಎಸ್ ಮೀಸಲಾತಿಗೆ ವಿರುದ್ಧವಲ್ಲ, ಅಗತ್ಯವಿರುವವರೆಗೂ ಅವು ಮುಂದುವರಿಯಬೇಕು: ಮೋಹನ್ ಭಾಗವತ್ - RSS Chief On Reservations