ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಹುಲಿಕುಂಟೆ ಗ್ರಾಮದಲ್ಲಿ ನಾಲ್ಕನೇ ವೀರಗಲ್ಲು ಪತ್ತೆಯಾಗಿದೆ. ಹುಲಿ ಬೇಟೆ ವೀರಗಲ್ಲುಗಳು ಗ್ರಾಮದ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಸಾಧ್ಯತೆಯೂ ಇದೆ ಎಂಬ ಕುತೂಹಲ ಕೂಡ ಮೂಡಿದೆ.
ಈ ಕುರಿತು ಮಾತನಾಡಿರುವ ಇತಿಹಾಸಕಾರ ಡಾ.ಎಸ್ ವೆಂಕಟೇಶ್, ಹುಲಿಬೇಟೆಯ ವೀರಗಲ್ಲುಗಳು ದೊರೆತಿರುವುದು ತೀರಾ ಕಡಿಮೆ. ತೂಬಗೆರೆ ಹೋಬಳಿಯ ತಿಮ್ಮೋಜನಹಳ್ಳಿಯಲ್ಲಿ ಎರಡು ಮತ್ತು ಗೆದ್ದಲಪಾಳ್ಯದ ರಸ್ತೆಯಲ್ಲಿ ಒಂದು ಹುಲಿಬೇಟೆ ವೀರಗಲ್ಲುಗಳು ಲಭ್ಯವಾಗಿವೆ. ಈಗ ಹುಲಿಕುಂಟೆ ಗ್ರಾಮದಲ್ಲಿ ಹುಲಿಬೇಟೆಯ ವೀರಗಲ್ಲೊಂದು ಲಭ್ಯವಾಗಿದೆ. ಶಿಲ್ಪಲಕ್ಷಣದ ಆಧಾರದ ಮೇಲೆ ಗಮನಿಸಿದರೆ, ಇದು 10 ನೇ ಶತಮಾನಕ್ಕೆ ಸೇರಿಸಬಹುದು. ವೀರನು ಆಲೀಢಭಂಗಿಯಲ್ಲಿ ನಿಂತಿದ್ದು, ತನ್ನ ಬಲಗೈಯಲ್ಲಿ ಖಡ್ಗವನ್ನು ಹಿಡಿದು ಮೇಲೆತ್ತಿರುವನು. ಎದುರುಗಡೆ ವೀರನತ್ತ ಮುನ್ನುಗ್ಗುತ್ತಿರುವ ಹುಲಿಯ ಚಿತ್ರಣವಿದೆ. ಈ ವೀರಗಲ್ಲಿನ ಮೇಲೆ ಯಾವುದೇ ರೀತಿಯ ಬರೆವಣಿಗೆ ಇಲ್ಲ ಎಂದರು.
ಮುಂದುವರೆದು ಮಾತನಾಡಿರುವ ಅವರು, ಮಾನವ ಮತ್ತು ಹುಲಿಗಳ ಸಂಘರ್ಷ ಇಂದು - ನಿನ್ನೆಯದಲ್ಲ. ಇತಿಹಾಸ ಪೂರ್ವ ಕಾಲದಿಂದಲೂ ಮಾನವ ನಿರಂತರವಾಗಿ ಹುಲಿಗಳ ಜೊತೆಗೆ ಸಂಘರ್ಷ ಮಾಡಿಕೊಂಡು ಬಂದಿದ್ದಾನೆ. ಹೀಗೆ ಹುಲಿಜೊತೆ ಕಾದಾಡುವಾಗ ಮೃತಪಟ್ಟ ವೀರನ ಸ್ಮರಣಾರ್ಥ ನೆಟ್ಟಕಲ್ಲುಗಳೇ ಹುಲಿಬೇಟೆ ವೀರಗಲ್ಲುಗಳಾಗಿವೆ.
ಇಂತಹ ಸ್ಮಾರಕ ಶಿಲ್ಪಗಳಿಂದ ಹುಲಿಗಳ ವಾಸಸ್ಥಾನದ ಕುರಿತಂತೆ ಅಧ್ಯಯನ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಬ್ರಿಟಿಷ್ ಆಡಳಿತದ ಅವಧಿಯವರೆಗೆ ಈ ಭಾಗದಲ್ಲಿ ಹುಲಿಗಳಿದ್ದ ಮಾಹಿತಿಯಿದೆ. ಆದರೆ, ರಾಜ್ಯ ಅರಣ್ಯ ಇಲಾಖೆ ದಾಖಲೆಗಳ ಪ್ರಕಾರ 1950ರ ನಂತರ ಈ ಪ್ರದೇಶದಲ್ಲಿ ಹುಲಿಗಳಿರುವ ಕುರಿತು ಯಾವುದೇ ಮಾಹಿತಿಯಿಲ್ಲ.
ವಿಶೇಷ ಎಂದರೆ, ಇದೇ ಡಿಸೆಂಬರ್ 26 ಕ್ಕೆ ಹುಲಿಕುಂಟೆಯ ಬೇಟೆ ರಂಗನಾಥಸ್ವಾಮಿಯ ಜಾತ್ರೆಯಿದೆ. ಕಾಕತಾಳೀಯವೆಂಬಂತೆ ಇದೇ ಸಂದರ್ಭದಲ್ಲಿ ಹುಲಿಬೇಟೆ ವೀರಗಲ್ಲು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ: ಮಂಡ್ಯ: ಧ್ವಜಾರೋಹಣದ ಮೂಲಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ