ಹಾಸನ: ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಪತಿ ಶ್ರೀನಿವಾಸ್ (43), ಪತ್ನಿ ಶ್ವೇತಾ (36) ಹಾಗೂ ಪುತ್ರಿ ನಾಗಶ್ರೀ (13) ಮೃತರು.
ಘಟನೆಯ ವಿವರ: ಶ್ರೀನಿವಾಸ್ ಕಾರು ಚಾಲಕರಾಗಿದ್ದರು. ಪತ್ನಿ ಶ್ವೇತಾ ಶ್ರವಣಬೆಳಗೊಳ ಸಮೀಪದ ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ಮಗಳ ಶಿಕ್ಷಣ ಹಾಗು ಇತರೆ ವೆಚ್ಚಗಳಿಗಾಗಿ ಶ್ರೀನಿವಾಸ್ ವಿವಿಧೆಡೆ ಸಾಲ ಮಾಡಿದ್ದರು. ಈ ಸಾಲ ತೀರಿಸಲಾಗದೇ ದಂಪತಿ ಸಂಕಷ್ಟದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಮಂಗಳವಾರ ಮನೆಯಿಂದ ಮಗಳನ್ನು ಕರೆದುಕೊಂಡು ಹೋದ ದಂಪತಿ, ವಾಪಸ್ ಬಂದಿರಲಿಲ್ಲ. ಪೊಷಕರು ಎಲ್ಲೆಡೆ ಹುಡುಕಾಡಿದ್ದರು. ಸುಳಿವು ಸಿಗದೇ ಇದ್ದಾಗ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮರುದಿನ ಬಾಗೂರು ಹೋಬಳಿಯ ಮುದ್ಲಾಪುರ ಸಮೀಪ ಶ್ರೀನಿವಾಸ್ ಮತ್ತು ಶ್ವೇತಾ ದಂಪತಿಯ ಶವ ಪತ್ತೆಯಾಗಿತ್ತು. ನಾಗಶ್ರೀ ಶವ ಪತ್ತೆಯಾಗದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಎಸ್ಪಿ ಮಹಮದ್ ಸುಜಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುಗ್ಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಶಿವಮೊಗ್ಗ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ, ಕಾರಣ ನಿಗೂಢ - Shivamogga Suicide Case