ಬಾಗಲಕೋಟೆ: ''ದೇಶದ್ರೋಹದ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆ ಆಗಬೇಕು'' ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಸಂವಿಧಾನ ಕುರಿತ ನಡೆಯುತ್ತಿರುವ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿ, ''ಇತ್ತೀಚಿಗೆ ಬಾಂಬ್ ಸ್ಫೋಟಗಳು ಆಗುತ್ತಿವೆ. ಆ ಹಿನ್ನೆಲೆಯನ್ನು ವಿಚಾರಣೆ ಮಾಡುವಂತಹ ಸಂಸ್ಥೆಗಳು ಶೀಘ್ರವಾಗಿ ವಿಚಾರಣೆ ನಡೆಸಬೇಕು. ಯಾಕೆ ಹೀಗೆ ಆಗುತ್ತಿವೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು'' ಎಂದರು.
ಪಾಕ್ ಪರ ಘೋಷಣೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ''ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಸತ್ಯಕ್ಕೆ ಬೆಲೆ ಇಲ್ಲ. ತಾವು ಹೇಳಿದ್ದೆ ಸತ್ಯ ಎನ್ನುವಂತವರು ಹೆಚ್ಚಾಗಿದ್ದಾರೆ. ಈ ಮೂಲಕ ಜನರನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುವಂತಹ ಪ್ರಯತ್ನ ನಡೆಯುತ್ತಿದೆ. ಜೈಕಾರ ಕೂಗಿದ್ದು ಟಿವಿಯಲ್ಲಿ ಬಂದಿತ್ತು. ಅವರ ಪಕ್ಕದಲ್ಲಿ ಇದ್ದವರು ಬಾಯಿಯ ಮುಚ್ಚಲು ಪ್ರಯತ್ನ ಮಾಡಿದ್ದಾರೆ. ಯಾಕೆ ಈ ಬಗ್ಗೆ ಪ್ರತಿಕ್ರಿಯೆ ಕೊಡಬೇಕಿತ್ತು. ಜೈಕಾರ ಕೂಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಯಾವುದೇ ವಿಚಾರದಲ್ಲಿ ಚರ್ಚೆ ನಡೆದರೂ ಸತ್ಯ ಬಹಳ ದೂರ ಇದೆ'' ಎಂದು ಹೇಳಿದರು.
ನಂತರ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಂತೋಷ್ ಹೆಗ್ಡೆ ಅವರು, ರಾಜಕೀಯದಲ್ಲಿ ಶಿಕ್ಷಣದ ಅರ್ಹತೆ ಮತ್ತು ಭ್ರಷ್ಟಾಚಾರದ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕ ಎಚ್.ವೈ. ಮೇಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಆರ್. ಪಾಟೀಲ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸಂವಿಧಾನ ಕುರಿತ ಅನಂತ್ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಅಲ್ಲ, ಬಿಜೆಪಿಯ ಗುಪ್ತ ಅಜೆಂಡಾ: ಸಿಎಂ