ಚಿಕ್ಕೋಡಿ(ಬೆಳಗಾವಿ): ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹುಕ್ಕೇರಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ಸಿಎಂ ಇದ್ದಾರೆ. ಅವರನ್ನು ಇಳಿಸೋರು ಯಾರು?. ಪದೇ ಪದೇ ಸಿಎಂ ಬದಲಾವಣೆ ಚರ್ಚೆ ಅವಶ್ಯಕತೆ ಇಲ್ಲ. ಸರ್ಕಾರದ ಮುಂದೆ ಸಾಕಷ್ಟು ಸಮಸ್ಯೆಗಳಿವೆ. ಮೊದಲು ಆ ಕಡೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಮುಡಾ ಪ್ರಕರಣ ಸಂಬಂಧ ಕೋರ್ಟ್ನಲ್ಲಿ ಹೀಗೆಯೇ ಆಗುತ್ತದೆ ಎಂದು ಹೇಳಲಾಗದು. ದೇಶದಲ್ಲಿ ಬಹಳಷ್ಟು ಜನರ ಮೇಲೆ ಪ್ರಕರಣಗಳಿದ್ದರೂ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಿದ್ದಾರೆ. ಒಂದು ವೇಳೆ ಪ್ರಕರಣ ದಾಖಲಾದರೆ ಅದರ ಪಾಡಿಗೆ ಅದು ನಡೆಯುತ್ತದೆ. ರಾಜೀನಾಮೆ ಕೊಡಬೇಕೆಂದು ಕಾನೂನಿನಲ್ಲಿ ಹೇಳಿಲ್ಲ ಎಂದರು.
ಮುಖ್ಯಮಂತ್ರಿ ಅಭಿಯಾನ ಅಂತ ನಾವ್ಯಾರೂ ಶುರು ಮಾಡಿಲ್ಲ: ಬರೀ ಮುಖ್ಯಮಂತ್ರಿ, ಮುಖ್ಯಮಂತ್ರಿ ಎನ್ನುತ್ತಿದ್ದರೆ ಇವರಿಗೇನು ಕೆಲಸ ಇಲ್ಲವೇ ಎಂದು ಜನ ನಮಗೆ ಉಗುಳುತ್ತಾರೆ. ಮುಖ್ಯಮಂತ್ರಿ ಅಭಿಯಾನ ಅಂತ ನಾವ್ಯಾರೂ ಶುರು ಮಾಡಿಲ್ಲ. ಮುಖ್ಯಮಂತ್ರಿ ಮಾಡುವುದು ಪಕ್ಷ, ಶಾಸಕರು ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಕುರಿತು ಪ್ರತಿಕ್ರಿಯಿಸಿ, ಅದು ಬೇರೆ ವಿಚಾರಕ್ಕೆ ರಾಹುಲ್ ಗಾಂಧಿ ಭೇಟಿಗೆ ಹೋಗಿದ್ದೆ. ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಎಂದು ಪುನರುಚ್ಚರಿಸಿದರು.
ಚಿಕ್ಕೋಡಿ ಜಿಲ್ಲೆ ಮಾಡಲು ನಾವೆಲ್ಲರೂ ಸಕಾರಾತ್ಮಕವಾಗಿದ್ದೇವೆ. ಸಮಯ ಬರಲಿ, ಕಾಯುತ್ತಿದ್ದೇವೆ ಎಂದರು.
ಇದನ್ನೂ ಓದಿ: ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ ಅರ್ಜಿ ವಿಚಾರಣೆ ಸೆ.12ಕ್ಕೆ ಮುಂದೂಡಿಕೆ - Muda Case